ಪರಿಷತ್‍ಗೆ ಮರು ಆಯ್ಕೆಯಾದ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಪಕ್ಷಾತೀತವಾಗಿ ಅಭಿನಂದನೆ

ಬೆಳಗಾವಿ, ಡಿ.15: ಪರಿಷತ್‍ಗೆ ಮರು ಆಯ್ಕೆಯಾದ ವಿಧಾನ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪಕ್ಷಾತೀತವಾಗಿ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಬುಧವಾರ ಪರಿಷತ್ ಕಲಾಪದ ಶೂನ್ಯವೇಳೆ ಬಳಿಕ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಇಂದು ಮೇಲ್ಮನೆಯನ್ನು ಚಿಂತಕರ ಚಾವಡಿ ಎನ್ನುವ ಬದಲು ಕುಬೇರರ ಮನೆ ಎನ್ನುವಂತಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ ಎಂದು ನುಡಿದರು.
ಇಂತಹ ಸಂದರ್ಭದಲ್ಲಿ ಸಭಾನಾಯಕ ಶ್ರೀನಿವಾಸ ಪೂಜಾರಿ ನಯಾಪೈಸೆ ಖರ್ಚು ಮಾಡದೆ ಆಯ್ಕೆ ಆಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೆ, ಅವರು ಚಿಂತಕರ ಚಾವಡಿಗೆ ಮೆರಗು ತಂದಿದ್ದಾರೆ. ಇದೇ ಮಾದರಿಯಲ್ಲಿ ಪರಿಷತ್ ಚುನಾವಣೆ ಎಲ್ಲ ಕಡೆ ಆಗಲಿ ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಪ್ರಸ್ತಾಪಿಸಿ, ಪೂಜಾರಿ ಅವರು, ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿ, ಫೆÇೀಟೋಗ್ರಾಫರ್ ಆಗಿದ್ದರು. ಶ್ರೀನಿವಾಸ ಪೂಜಾರಿ ಹಾಗೂ ಪ್ರತಾಪ್ ಚಂದ್ರಶೆಟ್ಟಿ ಇಬ್ಬರೂ ಮೂರು ಕಾಸಿಲ್ಲದೆ ಗೆದ್ದು ತೋರಿಸಿದ್ದವರು ಎಂದು ಬಣ್ಣಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಪುಟ್ಟಣ್ಣ, ನಮಗೆ ಮಾನಸಿಕವಾಗಿ ನೋವಾಗಿದ್ದು, ಎಸ್.ಆರ್.ಪಾಟೀಲ್ ಸದನದಲ್ಲಿ ಮುಂದುವರೆಯಬೇಕು ಎಂದರು.
ಇದಕ್ಕೆ ಉತ್ತರಿಸಿದ ಕಾಂಗ್ರೆಸ್ಸಿನ ಹರಿಪ್ರಸಾದ್, ಹೊರಗಡೆ ಚಿಂತಕರ ಚಾವಡಿ ಹೋಗಿ ಕುಬೇರರ ಚಾವಡಿ ಆಗಿದೆ. ಇದರ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಅವರ ಒಂದು ಮಾತು ನೆನಪಾಗುತ್ತಿದೆ. ಅದು ‘ಮೇಲ್ಮನೆ ಕೆಳಮನೆಯಾಗಿದೆ, ಕೆಳಮನೆ ನೆಲಮನೆ ಆಗಿದೆ.’ ಅದನ್ನು ನಾವೆಲ್ಲಾ ಅವಲೋಕನ ಮಾಡಬೇಕು ಎಂದು ಹೇಳಿದರು.
ಅದು ಅಲ್ಲದೆ, ಕಾಂಗ್ರೆಸ್‍ನಲ್ಲಿ ಒಂದು ನಿಯಮವಿದೆ. 4 ಬಾರಿ ಆಯ್ಕೆಯಾದವರು ಮತ್ತೆ ಸ್ಪರ್ಧೆ ಮಾಡುವಂತಿಲ್ಲ. ಆದರೂ ಪಕ್ಷ ಅವರಿಗೆ ಎರಡನೆ ಸ್ಥಾನಕ್ಕೆ ಸ್ಪರ್ಧೆ ಮಾಡಲು ಸೂಚಿಸಿತ್ತು. ಆದರೆ ಅವರೇ ಕಣಕ್ಕಿಳಿಯಲಿಲ್ಲ. ಮುಂದೆ ಪಾಟೀಲ್ ಅವರಿಗೆ ತಕ್ಕ ಗೌರವವನ್ನು ಕಾಂಗ್ರೆಸ್ ನೀಡಲಿದೆ ಎಂದು ನುಡಿದರು.
ನಂತರ ಎಲ್ಲ ಸದಸ್ಯರ ಪರ ಕೋಟ ಶ್ರೀನಿವಾಸ ಪೂಜಾರಿಗೆ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅಭಿನಂದನೆ ಸಲ್ಲಿಸಿದರು.







