ದೇರಳಕಟ್ಟೆ: ಪಿಎಫ್ಐ ವತಿಯಿಂದ ಪ್ರತಿಭಟನೆ

ಕೊಣಾಜೆ: ಉಪ್ಪಿನಂಗಡಿ ಠಾಣೆಯೆದುರು ಪ್ರತಿಭಟನೆ ನಡೆಸುತ್ತಿದ್ದ ಪಿಎಫ್ ಐ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆಯನ್ನು ಖಂಡಿಸಿ ದೇರಳಕಟ್ಟೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಯದ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಎಸ್ ಡಿ ಪಿ ಐ ಜಿಲ್ಲಾ ಸಮಿತಿಯ ಅಶ್ರಫ್ ಕೆ.ಸಿ.ರೋಡ್ ಮಾತನಾಡಿ, ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನೀಯ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಸಂವಿಧಾನವನ್ನು ನೀವು ನಾಶ ಮಾಡ್ಲಿಕೆ ಹೋದರೆ ನಾವು ವಿರೋಧ ಮಾಡಿಯೇ ಮಾಡ್ತೇವೆ. ದೇಶದ ಪರಂಪರೆಯನ್ನು ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪೊಲೀಸರೇ ಸಂಘದ ಪುಸ್ತಕವನ್ನು ಹೊರಗಿಟ್ಟು, ಪೊಲೀಸ್ ಕಾನೂನು ವ್ಯವಸ್ಥೆಯನ್ನು ಸರಿಯಾಗಿ ಓದಿ ಸಮಾಜದ ಸೌಹಾರ್ದತೆಯನ್ನು ಕಾಪಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ.ಕ.ಮುಸ್ಲಿಂ ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯರಾದ ಹಿದಾಯತ್ ಮಾರಿಪಲ್ಲ ಮಾತನಾಡಿದರು. ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಸೇರಿದಂತೆ ಎಸ್ ಡಿಪಿಐ, ಪಿಎಫ್ ಐ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಝೈನುದ್ದೀನ್ ಮಲಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.








