ಎಚ್.ಡಿ.ಕೋಟೆ: ಸವರ್ಣೀಯರಿಂದ ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ; ಮೂವರು ವಶಕ್ಕೆ
11 ಮಂದಿ ವಿರುದ್ಧ ಪ್ರಕರಣ ದಾಖಲು

ಗಾಯಾಳು ಯುವಕ
ಎಚ್.ಡಿ.ಕೋಟೆ, ಡಿ.15: ಗ್ರಾಮದ ದಲಿತ ಮತ್ತು ಸವರ್ಣೀಯರ ನಡುವೆ ವೈಶಮ್ಯ ಭುಗಿಲೆದ್ದಿದ್ದು, ದಲಿತ ಯುವಕನ ಮೇಲೆ ಸೈಕಲ್ಚೈನ್ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪದಲ್ಲಿ 11 ಮಂದಿ ಸವರ್ಣೀಯರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ತಾಲೂಕಿನ ಅಣ್ಣೂರು ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಹೊಸಳ್ಳಿ ಗ್ರಾಮದ ಯೋಗೇಶ್ (25) ಗಾಯಗೊಂಡ ದಲಿತ ಯುವಕ. ಕೆಂಡ ಅಲಿಯಾಸ್ ಕೆಂಚ, ಆನಂದ, ನೀಲಪ್ಪ, ನಾಗೇಂದ್ರ, ಚಂದ್ರ, ಉಮೇಶ್, ಶಿವಕುಮಾರ್, ಮಧು, ಪಾಪಣ್ಣ ಸೇರಿ ಒಟ್ಟು 11 ಮಂದಿ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದು, ಇವರ ವಿರುದ್ಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯೋಗೇಶ್ ಅವರನ್ನು ಎಚ್.ಡಿ.ಕೋಟೆ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಸೋಮವಾರ ತಡರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ದಲಿತ ಕೇರಿ ಮತ್ತು ಲಿಂಗಾಯತ ಕೇರಿಗಳಲ್ಲಿ ತಲಾ ಒಂದೊಂದು ಪೊಲೀಸ್ ತುಕ್ಕಡಿಗಳನ್ನು ನಿಯೋಜಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಜ್ಜುಗೊಳಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಗ್ರಾಮದಲಿ ಶಾಂತಿಯ ವಾತಾವರಣ ಇದೆ ಎಂದು ತಿಳಿದು ಬಂದಿದೆ.
ಏನಿದು ಘಟನೆ: ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕೈದು ವರ್ಷಗಳ ಹಿಂದಿನಿಂದಲೂ ವೈಶಮ್ಯ ಇದ್ದೇ ಇದೆ. ಗ್ರಾಮದಲ್ಲಿ ಬಹುಸಂಖ್ಯೆಯಲ್ಲಿ ಸವರ್ಣೀಯರು, ಸುಮಾರು 40 ಕುಟುಂಬಗಳು ಮಾತ್ರ ದಲಿತರಿದ್ದಾರೆ. ಸೋಮವಾರ ದಲಿತ ಯುವಕ ಮಹೇಶ್ ಎಂಬವರು ಕೆಲಸದ ನಿಮಿತ್ತ ಗ್ರಾಮದ ಸಾರ್ವಜನಿಕ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಸವರ್ಣೀಯ ಯುವಕರು ಆ ರಸ್ತೆ ಮಾರ್ಗವಾಗಿ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ. ಅದೇ ದಿನ ಸಂಜೆ ವೇಳೆ ಮಹೇಶ್, ಯೋಗೇಶ್, ಸುರೇಶ್ ಎಂಬವರು ಸೇರಿದಂತೆ ಇನ್ನಿತರರು ಸಾರ್ವಜನಿಕ ರಸ್ತೆ ಮಾರ್ಗವಾಗಿ ಸಂಚರಸದೇ, ಬೇರೆ ಇನ್ನೆಲ್ಲಿ ಸಂಚರಿಸಬೇಕು? ಎಂದು ಮರು ಪ್ರಶ್ನಿಸಿದ್ದಾರೆ. ಈ ಸಂಬಂಧ ಮಾತಿನ ಚಕಮಕಿ ನಡೆದಿದ್ದು, ಸವರ್ಣೀಯ ಯುವಕರ ಗುಂಪು ಅವಾಚ್ಯ ಪದಗಳು ಮತ್ತು ಜಾತಿ ನಿಂದನೆ ಮಾಡಿದ್ದಲ್ಲದೇ, ಸೈಕಲ್ ಚೈನ್ನಿಂದ ಯೋಗೇಶ್ನ ತಲೆಗೆ ಗಂಭೀರ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.







