ಕೇಂದ್ರ ಸರಕಾರದ ಸಂಸ್ಥೆಗೆ ತೆರಿಗೆ ಪಾವತಿಸಲು ನೊಟೀಸ್ ಜಾರಿ: ಕ್ರಮ ಜರುಗಿಸದಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು, ಡಿ.15: ಕೇಂದ್ರ ಸರಕಾರದ ಅಧೀನದಲ್ಲಿರುವ ಫ್ಲೈವುಡ್ ಸಂಶೋಧನಾ ಸಂಸ್ಥೆಗೆ ಆಸ್ತಿ ತೆರಿಗೆ ಪಾವತಿಸುವಂತೆ ಸೂಚಿಸಿ ಬಿಬಿಎಂಪಿ ನೊಟೀಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ಮುಂದಿನ ವಿಚಾರಣೆವರೆಗೆ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಬಿಬಿಎಂಪಿಗೆ ಸೂಚನೆ ನೀಡಿದೆ.
ಈ ನೊಟೀಸ್ ಪ್ರಶ್ನಿಸಿ ಸಂಶೋಧನಾ ಸಂಸ್ಥೆಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿಗೆ ಈ ಸೂಚನೆ ನೀಡಿದೆ.
ಸಂವಿಧಾನದ 285 (1)ನೆ ವಿಧಿಯಡಿ ತೆರಿಗೆ ಕೇಂದ್ರ ಸರಕಾರದ ಸುಪರ್ದಿಯಲ್ಲಿರುವ ಆಸ್ತಿಗಳಿಗೆ ತೆರಿಗೆ ವಿಧಿಸಲು ಅವಕಾಶವಿಲ್ಲ. ಆದರೆ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಡಿಮಾಂಡ್ ನೊಟೀಸ್ ನೀಡಿದೆ ಎಂದು ದೂರಿರುವ ಅರ್ಜಿದಾರರು ಬಿಬಿಎಂಪಿಯ ಅಧಿಕಾರ ವ್ಯಾಪ್ತಿ ಪ್ರಶ್ನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಪೀಠ, ಕರ್ನಾಟಕ ಸರಕಾರವು 1963ರಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 16.18 ಎಕರೆ ಭೂಮಿಯನ್ನು ಕೇಂದ್ರ ಸರಕಾರಕ್ಕೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ನೀಡಿತ್ತು. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಯು ಕೇಂದ್ರ ಸರಕಾರದ ಕೈಗಾರಿಕಾ ಇಲಾಖೆಯಿಂದ ಅನುದಾನ ಪಡೆದುಕೊಳ್ಳುತ್ತಿದೆ.







