ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ: ಅಬಕಾರಿ ಸಚಿವ ಕೆ. ಗೋಪಾಲಯ್ಯ

ಬೆಳಗಾವಿ , ಡಿ. 15: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಕಿರಾಣಿ ಅಂಗಡಿ ಸೇರಿದಂತೆ ವಿವಿಧೆಡೆಗಳಲ್ಲಿ ಮದ್ಯ ಮಾರಾಟವನ್ನು ಕಟ್ಟುನಿಟ್ಟಿನಿಂದ ತಡೆಯಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಸವನಗೌಡ ದದ್ದಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮದ್ಯ ಮಾರಾಟಕ್ಕೆ ನಿಯಮಾವಳಿ ಪ್ರಕಾರ ಮಾತ್ರ ಅನುಮತಿಯನ್ನು ನೀಡಲಾಗುತ್ತಿದೆ.
ರಾಜ್ಯದಲ್ಲಿ 2018-19ರಲ್ಲಿ 159, 2019-20ರಲ್ಲಿ 206 ಮತ್ತು 2020-21ರಲ್ಲಿ 203 ಸಿಎಲ್-9 ಪರವಾನಿಗೆ ನೀಡಲಾಗಿದೆ. ಅನಧಿಕೃತ ಮದ್ಯ ಮಾರಾಟ ತಡೆಗೆ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಲಬೆರಕೆ ಮದ್ಯ ಮಾರಾಟ ಕುರಿತು ನಿರ್ದಿಷ್ಟ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಸಾರಗಳ ಮೇಲೆ ದುಷ್ಪರಿಣಾಮ: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಯಾವುದೇ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಸಂಸಾರಗಳು ಹಾಳಾಗುತ್ತಿವೆ. ಜೊತೆಗೆ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಅವರ ಮಕ್ಕಳ ಭವಿಷ್ಯವೇ ಅಂಧಕಾರಕ್ಕೆ ಸಿಲುಕಿದೆ.
ಒಂದು ವೇಳೆ ಸರಕಾರಕ್ಕೆ ತನ್ನ ಅದಾಯ ಹೆಚ್ಚಿಸಿಕೊಳ್ಳುವ ಇರಾದೆ ಇದ್ದರೆ ಎಂಎಸ್‍ಐಎಲ್ ಮದ್ಯದಂಗಡಿಗಳನ್ನು ಹೆಚ್ಚಿಸಿ, ಜನತೆ ಆರೋಗ್ಯ, ಕುಟುಂಬಗಳನ್ನು ರಕ್ಷಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯರಾದ ನಾರಾಯಣಸ್ವಾಮಿ, ರೂಪಕಲಾ, ತುಕಾರಾಮ್ ಸೇರಿದಂತೆ ಇನ್ನಿತರರು ಆಗ್ರಹಿಸಿದರು.







