ಹೈರಿಸ್ಕ್ ದೇಶಗಳಿಂದ ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ ಕೊವೀಡ್ ಪರೀಕ್ಷೆ ಕಡ್ಡಾಯ

ಬೆಂಗಳೂರು, ಡಿ.15: ಹೊರ ದೇಶದಿಂದ ಬರುವವರನ್ನು, ವಿಶೇಷವಾಗಿ ಹೈರಿಸ್ಕ್ ಇರುವ ದೇಶಗಳಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಕೊವೀಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ನಗರ ಕೋವಿಡ್ ತಜ್ಞರ ಸಮಿತಿಯ ಅಧ್ಯಕ್ಷ ಗೌರವ್ ಗುಪ್ತಾ ತಿಳಿಸಿದ್ದಾರೆ.
ಬುಧವಾರ ಕೇಂದ್ರ ಕಚೇರಿಯ ಆವರಣದಲ್ಲಿ ಮಾತನಾಡಿದ ಅವರು, ಸದ್ಯ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದ್ದು, ಅದಕ್ಕೆ ತಕ್ಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೆಯೇ ಒಮೈಕ್ರಾನ್ ಹರಡದಂತೆ ಕ್ರಮವಹಿಸಲು ವಿದೇಶದಿಂದ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ, ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಬಂದರೂ ಕ್ವಾರಂಟೈನ್ ಮಾಡಲು ಚಿಂತಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 3 ಸಾವಿರ ಹಾಸಿಗೆಗಳನ್ನು ಕೋವಿಡ್ ಹಾಗೂ ಒಮೈಕ್ರಾನ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದರು.





