ಮಧ್ಯಪ್ರದೇಶ: ಮ್ಯಾನ್ ಹೋಲ್ ಅಳತೆ ವೇಳೆ ಇಬ್ಬರ ಸಾವು, ಗುಜರಾತ್ ಕಂಪನಿ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಭೋಪಾಲ,ಡಿ.15: ನಗರದಲ್ಲಿಯ ಮ್ಯಾನ್ ಹೋಲೊಂದರ ಆಳವನ್ನು ಅಳತೆ ಮಾಡುತ್ತಿದ್ದಾಗ ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಮೃತಪಟ್ಟ ಬಳಿಕ ಕಾಮಗಾರಿಯನ್ನು ವಹಿಸಿಕೊಂಡಿರುವ ಗುಜರಾತ ಮೂಲದ ಖಾಸಗಿ ನಿರ್ಮಾಣ ಕಂಪನಿಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮಧ್ಯಪ್ರದೇಶದ ನಗರಾಡಳಿತ ಸಚಿವ ಭೂಪೇಂದ್ರ ಸಿಂಗ್ ಅವರು ಆದೇಶಿಸಿದ್ದಾರೆ. ಮೃತರು ಕಂಪನಿಯ ಸಿಬ್ಬಂದಿಗಳಾಗಿದ್ದರು.
ಕಂಪನಿಯಿಂದ ಸುರಕ್ಷಾ ಕ್ರಮಗಳ ಕೊರತೆ ಸೋಮವಾರ ಸಂಭವಿಸಿದ ದುರಂತಕ್ಕೆ ಕಾರಣ ಎನ್ನುವುದನ್ನು ಭೋಪಾಲ ಮನಪಾ ಆಯುಕ್ತರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಂಗಳವಾರ ಸಂಜೆ ಹೊರಡಿಸಲಾಗಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿಲಾಗಿದೆ. ಮೃತರ ಕುಟುಂಬಗಳಿಗೆ ತಲಾ 10 ಲ.ರೂ.ಪರಿಹಾರ ನೀಡುವಂತೆ ಮತ್ತು ಭೋಪಾಲದಲ್ಲಿ ಒಳಚರಂಡಿ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಕಿತಾ ಕನ್ಸ್ಟ್ರಕ್ಷನ್ ಕಂಪನಿಗೆ ದಂಡ ವಿಧಿಸುವಂತೆಯೂ ಸಿಂಗ್ ಆದೇಶಿಸಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ ಖುಷಿನಗರ ನಿವಾಸಿ ಇಂಜಿನಿಯರ್ ದೀಪಕ್ ಕುಮಾರ್ ಸಿಂಗ್ (28) ಮತ್ತು ಮಧ್ಯಪ್ರದೇಶದ ಝಬುವಾ ಜಿಲ್ಲೆಯ ನಿವಾಸಿ ಅಪ್ರಾಪ್ತ ವಯಸ್ಕ ಕಾರ್ಮಿಕ ಭರತ್ ಸಿಂಗ್ ಎಂದು ಗುರುತಿಸಲಾಗಿದೆ. ಇವರಿಬ್ಬರ ಶವಗಳು ಸೋಮವಾರ 20 ಅಡಿ ಆಳದ ಮ್ಯಾನ್ಹೋಲ್ನಲ್ಲಿ ಪತ್ತೆಯಾಗಿದ್ದವು.