ಧಾರ್ಮಿಕ ಚಟುವಟಿಕೆಗಳಿಗಾಗಿ ಸಾರ್ವಜನಿಕ ಜಾಗಗಳ ಬಳಕೆ: ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ ಎಂದ ಕೇಂದ್ರ
Photo: PTI
ಹೊಸದಿಲ್ಲಿ,ಡಿ.15: ವಿವಿಧ ಧಾರ್ಮಿಕ ಚಟುವಟಿಕೆಗಳಿಗಾಗಿ ಸಾರ್ವಜನಿಕ ಜಾಗಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ತಾನು ಯಾವುದೇ ಮಾರ್ಗಸೂಚಿಗಳನ್ನು ಹೊರಡಿಸಿಲ್ಲ ಎಂದು ಕೇಂದ್ರವು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿತು.
ಆಪ್ ಸಂಸದ ಸುಶೀಲ ಗುಪ್ತಾ ಅವರ ಪ್ರಶ್ನೆಯೊಂದಕ್ಕೆ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು,ಭೂಮಿಯು ರಾಜ್ಯದ ವಿಷಯವಾಗಿದೆ ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುವುದು ಸಂಬಂಧಿತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಹರ್ಯಾಣದ ಗುರುಗ್ರಾಮದ ಮುಸ್ಲಿಮರು ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಸರಕಾರಕ್ಕೆ ಸೇರಿದ ಮೈದಾನ ಪ್ರದೇಶಗಳಲ್ಲಿ ನಮಾಝ್ ಸಲ್ಲಿಸಲು ಮುಂದಾದಾಗೆಲ್ಲ ಕಿರುಕುಳಗಳನ್ನೆದುರಿಸುತ್ತಿದ್ದು,ಈ ಕುರಿತು ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಗುಪ್ತಾ ಅವರು ಪ್ರಶ್ನೆಯನ್ನು ಕೇಳಿದ್ದರು
ಕಳೆದ ವಾರ 2018ರಲ್ಲಿ ಹಿಂದುಗಳೊಂದಿಗೆ ಘರ್ಷಣೆಗಳ ಬಳಿಕ ಮಾಡಿಕೊಳ್ಳಲಾಗಿದ್ದ ಒಡಂಬಡಿಕೆಯನ್ನು ಹಿಂದೆಗೆದುಕೊಂಡಿದ್ದ ಹರ್ಯಾಣದ ಮುಖ್ಯಮಂತ್ರಿ ಎಂ.ಎಲ್ ಖಟ್ಟರ್ ಅವರು,ಗುರುಗ್ರಾಮದ ಮುಸ್ಲಿಮರು ತೆರೆದ ಸ್ಥಳಗಳಲ್ಲಿ ನಮಾಝ್ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳಿದ್ದರು.