ಸೆಮಿಕಂಡಕ್ಟರ್ ಗಳ ಉತ್ಪಾದನೆ ಉತ್ತೇಜಿಸಲು 76 ಸಾವಿರ ಕೋಟಿ ರೂ. ಅನುದಾನಕ್ಕೆ ಕೇಂದ್ರ ಸಂಪುಟ ಅಸ್ತು
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯು ಸೆಮಿಕಂಡಕ್ಟರ್ಗಳಿಗಾಗಿ ಉತ್ಪಾದನೆಗೆ ಉತ್ತೇಜನ ನೀಡುವ ಪಿಎಲ್ಐ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ. ಮುಂದಿನ ಆರು ವರ್ಷಗಳಲ್ಲಿ ಈ ಯೋಜನೆಗಾಗಿ 76 ಸಾವಿರ ಕೋಟಿ ರೂ.ಗಳನ್ನು ವ್ಯಯಿಸಲಾಗುವುದು ಎಂದು ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳ ಬಗ್ಗೆ ವಿವರಗಳನ್ನು ನೀಡಿದ ಠಾಕೂರ್, ಪಿಎಲ್ಐ ಯೋಜನೆಯು ದೇಶದಲ್ಲಿ ಸೆಮಿಕಂಡಕ್ಟರ್ಗಳು ಹಾಗೂ ಡಿಸ್ಪ್ಲೇ ಬೋರ್ಡ್ ಗಳ ಉತ್ಪಾದನೆಗೆ ಉತ್ತೇಜನ ನೀಡಲಿದೆ ಎಂದರು.
ಟೆಲಿಕಾಂ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ ಪಿಎಲ್ಐ ಯೋಜನೆಯು ಮೈಕ್ರೋ ಚಿಪ್ಗಳ ವಿನ್ಯಾಸ, ಫೆಬ್ರಿಕೇಶನ್,ಪ್ಯಾಕಿಂಗ್ ಹಾಗೂ ಟೆಸ್ಟಿಂಗ್ ಕಾರ್ಯಗಳಿಗೆ ನೆರವು ನೀಡಲಿದೆ ಎಂದರು.
ರೂಪೇ ಡೆಬಿಟ್ ಕಾರ್ಡ್ ಹಾಗೂ ಭೀಮ್ ಯುಪಿಐ ಸಣ್ಣ ಖಾತೆಗಳ ಮೂಲಕ ಡಿಜಿಟಲ್ ಹಣಪಾವತಿನ್ನು ಪ್ರೋತ್ಸಾಹಿಸುವುದಕ್ಕಾಗಿ ಯೋಜನೆಯೊಂದನ್ನು ಜಾರಿಗೊಳಿಸುವುದಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದಾಗಿ ಕೇಂದ್ರದ ಬೊಕ್ಕಸಕ್ಕೆ 1300 ಕೋಟಿ ರೂ. ವೆಚ್ಚವಾಗಲಿದೆ ಎಂದು ಠಾಕೂರ್ ತಿಳಿಸಿದ್ದಾರೆ.
2021-26ನೇ ಸಾಲಿನ ‘ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ’ಯ ಜಾರಿಗೂ ಸಂಪುಟವು ಅನುಮೋದನೆ ನೀಡಿದೆ. ಈ ಕಾರ್ಯಕ್ರಮದಿಂದಾಗಿ 22 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ