ಅಕ್ರಮ ಹಣ ವರ್ಗಾವಣೆ ಪ್ರಕರಣ: ಪನಾಮಾದ ಮಾಜಿ ಅಧ್ಯಕ್ಷರ ಪುತ್ರನ ಅಪರಾಧ ಸಾಬೀತು
ಪನಾಮಾ ಸಿಟಿ, ಡಿ.15: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪನಾಮಾದ ಮಾಜಿ ಅಧ್ಯಕ್ಷರ 2ನೇ ಪುತ್ರ ರಿಕಾರ್ಡೊ ಆಲ್ಬರ್ಟೊ ಮಾರ್ಟಿನೆಲಿ ಅಪರಾಧಿ ಎಂದು ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯ ತೀರ್ಪಿತ್ತಿದೆ. ಅವರನ್ನು ಗ್ವಾಟೆಮಾಲಾದಿಂದ ಅಮೆರಿಕಕ್ಕೆ ಶುಕ್ರವಾರ ಹಸ್ತಾಂತರಿಸಲಾಗಿತ್ತು. ಬ್ರೆಝಿಲ್ ನ ನಿರ್ಮಾಣ ಸಂಸ್ಥೆಯೂ ಶಾಮೀಲಾಗಿರುವ ಲಂಚ ಪ್ರಕರಣದಲ್ಲಿ 28 ಮಿಲಿಯನ್ ಡಾಲರ್ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ 42 ವರ್ಷದ ಆಲ್ಬರ್ಟೋರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಅವರ ಕಿರಿಯ ಸಹೋದರ ಲೂಯಿಸ್ ಎನ್ರಿಕ್ ಮಾರ್ಟಿನೆಲಿಯನ್ನೂ ನವೆಂಬರ್‌ನಲ್ಲಿ ಗ್ವಾಟೆಮಾಲದಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿದ್ದು ಇವರ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಡಿಸೆಂಬರ್ 2ರಂದು ತೀರ್ಪು ನೀಡಿದೆ. ಪನಾಮಾ ಹಾಗೂ ಇತರ ದೇಶಗಳಲ್ಲಿ ನಿರ್ಮಾಣ ಕಾಮಗಾರಿ ಪಡೆಯಲು ಬ್ರೆಝಿಲ್‌ನ ಸಂಸ್ಥೆ 700 ಮಿಲಿಯನ್ ಡಾಲರ್‌ಗೂ ಅಧಿಕ ಲಂಚವನ್ನು ಸರಕಾರಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಹಾಗೂ ಇತರರಿಗೆ ಪಾವತಿಸಿರುವ ಪ್ರಕರಣ ಇದಾಗಿದೆ. ಈ ಸಂಸ್ಥೆ ಅಮೆರಿಕದ ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ಉಲ್ಲಂಘಿಸಿದ ಪ್ರಕರಣದ ದೋಷಿ ಎಂದು 2016ರಲ್ಲಿ ತೀರ್ಪು ಹೊರಬಿದ್ದಿದೆ. ಮಾರ್ಟಿನೆಲಿ ಸಹೋದರರು 2009ರಿಂದ 2014ರವರೆಗೆ , ತಮ್ಮ ನಿಕಟವರ್ತಿಗಳು ಹಾಗೂ ಸಂಬಂಧಿಕರ ಹೆಸರಲ್ಲಿ ಲಂಚ ರೂಪದಲ್ಲಿ ಸ್ವೀಕರಿಸಿದ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಅಮೆರಿಕದ ನ್ಯಾಯಾಲಯ ಹೇಳಿದೆ.





