ಉತ್ತರ ಭಾರತಕ್ಕೆ ಈಗ ಶೀತಗಾಳಿಯ ಭೀತಿ

ಸಾಂದರ್ಭಿಕ ಚಿತ್ರ (Photo - PTI)
ಹೊಸದಿಲ್ಲಿ: ಪಂಜಾಬ್, ಹರ್ಯಾಣ, ಉತ್ತರ ರಾಜಸ್ಥಾನ, ಚಂಡೀಗಢ ಪ್ರದೇಶಗಳಲ್ಲಿ ಈ ತಿಂಗಳ 18ರಿಂದ 20ರವರೆಗೆ ಶೀತಗಾಳಿಯ ಪರಿಸ್ಥಿತಿ ವ್ಯಾಪಕವಾಗಿ ಇರಲಿದೆ ಎಂದು ಭಾರತದ ಹವಾಮಾನ ಇಲಾಖೆ ಅಂದಾಜಿಸಿದೆ.
ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮುಂದಿನ ಮೂರು ದಿನಗಳವರೆಗೆ ಲಘು ಹಾಗೂ ಮಂದ ಪ್ರಮಾಣದ ಮಳೆ ಅಥವಾ ಮಂಜು ಬೀಳಲಿದೆ ಎಂದು ಮುನ್ಸೂಚನೆ ನೀಡಿದೆ.
ಜಮ್ಮು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಗಾಳಿ ಪ್ರಸರಣ ರೂಪುಗೊಳ್ಳುತ್ತಿದ್ದು, ಪಶ್ಚಿಮ ಪ್ರಕ್ಷುಬ್ಧತೆಯ ಕಂಡುಬರುತ್ತಿದೆ. ಇಂಥದ್ದೇ ಸ್ಥಿತಿ ಅಫ್ಘಾನಿಸ್ತಾನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೂ ಇರಲಿದೆ. ಇವುಗಳ ಪ್ರಭಾವದಿಂದ ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಲೂಚಿಸ್ತಾನ, ಮುಝಫರಾಬಾದ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಲಘು ಮಳೆಯಾಗಲಿದೆ. ಉತ್ತರಾಖಂಡದಲ್ಲಿ ಡಿ.16-17ರಂದು, ಉತ್ತರ ಪಂಜಾಬ್, ಹರ್ಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಇಂದು ಮಳೆಯಾಗಲಿದೆ ಎಂದು ಅಂದಾಜಿಸಿದೆ.
ವಾಯವ್ಯ ಭಾರತದಲ್ಲಿ ಚದುರಿದಂತೆ ಲಘು ಪ್ರಮಾಣದ ಮಳೆ 16 ಮತ್ತು 17ರಂದು ಬೀಳಲಿದೆ. ಡಿಸೆಂಬರ್ 17ರ ಬಳಿಕ ತಾಪಮಾನ ಕುಸಿಯಲಿದೆ. ಪಂಜಾಬ್ನಲ್ಲಿ ಮಾತ್ರ ದಟ್ಟ ಮಂಜು ಬೀಳಲಿದೆ. ದೆಹಲಿಯಲ್ಲಿ ಕೂಡಾ ಮಂಜು ಬೀಳುವ ಸ್ಥಿತಿಯ ಮೇಲೆ ನಿಗಾ ಇರಿಸಿದ್ದೇವೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಹಿರಿಯ ವಿಜ್ಞಾನಿ ಆರ್.ಕೆ.ಜೆನಮನಿ ಹೇಳಿದ್ದಾರೆ.
ಬಯಲು ಪ್ರದೇಶಗಳಲ್ಲಿ ಶೀತಗಾಳಿ ಬೀಸಲಿದ್ದು, ಸತತ ಎರಡು ದಿನಗಳ ಕಾಲ ಉಷ್ಣಾಂಶ 10 ಡಿಗ್ರಿ ಸೆಲ್ಷಿಯಸ್ಗೆ ಕುಸಿಯಲಿದೆ. ಇದು ವಾಡಿಕೆಯ ತಾಪಮಾನಕ್ಕಿಂತ 4.5 ಅಂಶಗಳಷ್ಟು ಕಡಿಮೆ. ಕನಿಷ್ಠ ತಾಪಮಾನ 4 ಡಿಗ್ರಿಗಿಂತ ಕಡಿಮೆಯಾದರೂ ಅದನ್ನು ಶೀತಗಾಳಿ ಎಂದು ಪರಿಗಣಿಸಲಾಗುತ್ತದೆ. ತಮಿಳುನಾಡು, ಪುದುಚೇರಿ, ಕರಿಕ್ಕಲ್, ಅಂಡಮಾನ್ ನಿಕೋಬಾರ್ ದ್ವೀಪ, ಕೇರಳ- ಮಾಹೆ ಮತ್ತಿತರ ಪ್ರದೇಶಗಳಲ್ಲಿ ಮುಂದಿನ ಐದು ದಿನಗಳಲ್ಲಿ ಲಘು ಮಳೆಯಾಗಲಿದೆ. ಒಟ್ಟಾರೆಯಾಗಿ ಒಣಹವೆ ಇರಲಿದೆ. ವಾಯವ್ಯ ಹಾಗೂ ಕೇಂದ್ರ ಭಾರತದಲ್ಲಿ ಮುಂದಿನ ದಿನಗಳಲ್ಲಿ ಕನಿಷ್ಠ ಉಷ್ಣಾಂಶ 2-3 ಡಿಗ್ರಿಯಷ್ಟು ಕುಸಿಯಲಿದೆ ಎಂದು ಮುನ್ಸೂಚನೆ ನೀಡಿದೆ.