ಲೈಂಗಿಕ ಶೋಷಣೆ ಆರೋಪ: ಗೋವಾ ಬಿಜೆಪಿ ಸಚಿವ ರಾಜೀನಾಮೆ

ಮಿಲಿಂದ್ ನಾಯ್ಕ್ (Photo - PTI)
ಪಣಜಿ: ಗೋವಾದ ಬಿಜೆಪಿ ಶಾಸಕ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ ಮಿಲಿಂದ್ ನಾಯ್ಕ್, ಲೈಂಗಿಕ ಶೋಷಣೆ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಬುಧವಾರ ತಡರಾತ್ರಿ ಮುಖ್ಯಮಂತ್ರಿ ಕಚೇರಿ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, "ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆ" ಖಾತರಿಪಡಿಸುವ ಉದ್ದೇಶದಿಂದ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ರಾಜೀನಾಮೆಯನ್ನು ಸ್ವೀಕರಿಸಿ, ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಸಿಎಂಓ ಟ್ವೀಟ್ ಮಾಡಿದೆ. ಸಚಿವ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಷಾಮೀಲಾಗಿದ್ದಾಗಿ ವಿರೋಧ ಪಕ್ಷವಾದ ಕಾಂಗ್ರೆಸ್ ಆಪಾದಿಸಿತ್ತು.
ದಕ್ಷಿಣ ಗೋವಾದ ಮರ್ಮಗೋವಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ, ಪ್ರಮೋದ್ ಸಾವಂತ್ ನೇತೃತ್ವದ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆಯನ್ನು ನಿಭಾಯಿಸುತ್ತಿದ್ದರು. ಹಿಂದಿನ ಸಿಎಂ ಮನೋಹರ ಪಾರಿಕ್ಕರ್ ಸಂಪುಟದಲ್ಲೂ ಇವರು ಸಚಿವರಾಗಿದ್ದರು.
ಮಿಲಿಂದ್ ನಾಯ್ಕ್ ಸಚಿವರಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಶೋಷಿಸಿದ್ದರು ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಛೋಡನ್ಕರ್ ಆಪಾದಿಸಿದ್ದರು. ಸಾವಂತ್ ತಕ್ಷಣವೇ ಮಿಲಿಂದ್ ಅವರನ್ನು ವಜಾ ಮಾಡಬೇಕು ಮತ್ತು ತನಿಖೆ ಆರಂಭಿಸಬೇಕು ಎಂದು ಆಗ್ರಹಿಸಿದ್ದರು. ಹದಿನೈದು ದಿನಗಳ ಹಿಂದೆ ಛೋಡನ್ಕರ್ ಈ ವಿಷಯವನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು; ಆದರೆ ಸಚಿವರ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಅರೋಪಿ ಸಚಿವರನ್ನು ಸಂಪುಟದಿಂದ ಕೈಬಿಡಲು 15 ದಿನಗಳ ಗಡುವು ನೀಡಿದ್ದರು. ಸಚಿವರ ಹೆಸರನ್ನು ಬಹಿರಂಗಪಡಿಸಿ, ಸಂತ್ರಸ್ತ ಮಹಿಳೆ ಸಲ್ಲಿಸಿದ ದೂರಿನ ಪ್ರತಿಯನ್ನು ಒದಗಿಸುವಂತೆ ಸಿಎಂ ಸಾವಂತ್ ಕೇಳಿದ್ದರು. ಛೋಡನ್ಕರ್ ಅವರು ಮಿಲಿಂದ್ ನಾಯ್ಕ್ ಹೆಸರನ್ನು ಬಹಿರಂಗಪಡಿಸಿದ ಬಳಿಕ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಂಕಲ್ಪ ಅಮೋನ್ಕರ್ ಸಚಿವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತೆ ಮಹಿಳೆ ಮತ್ತು ಸಚಿವರ ನಡುವೆ ನಡೆದಿದೆ ಎನ್ನಲಾದ ಮಾತುಕತೆಯ ವೀಡಿಯೊವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗಿತ್ತು.