ಕೇಂದ್ರ ಸಚಿವ ಅಜಯ್ ಮಿಶ್ರಾ ಒಬ್ಬ ಕ್ರಿಮಿನಲ್: ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ: ಲಖಿಂಪುರ ಖೇರಿ ರೈತರ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಕುಮಾರ್ ಅವರನ್ನು ವಜಾಗೊಳಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದಂತೆ ಸಚಿವ (ಅಜಯ್ ಕುಮಾರ್ ಮಿಶ್ರಾ ಟೆನಿ) ಒಬ್ಬ ಕ್ರಿಮಿನಲ್ ಎಂದು ಸಂಸತ್ತಿನಲ್ಲಿ ಆರೋಪಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಒತ್ತಾಯಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಲೋಕಸಭೆಯಲ್ಲಿ ಭಾರೀ ಗದ್ದಲ, ಗೊಂದಲದ ನಡುವೆ ಸದನವನ್ನು 2 ಗಂಟೆಗೆ ಮುಂದೂಡಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಕಳಂಕಿತ ಸಚಿವರನ್ನು ರಕ್ಷಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕತ್ವವನ್ನು ವಹಿಸಿದ್ದ ರಾಹುಲ್ ಬುಧವಾರ ಆರೋಪಿಸಿದ್ದರು.
"ಇದು (ಲಖೀಂಪುರ ಖೇರಿ ಘಟನೆ) ಪಿತೂರಿ ಎಂದು ಹೇಳಲಾಗಿದೆ. ಇದರಲ್ಲಿ ಸಂಶಯವೇ ಇಲ್ಲ. ಇದರಲ್ಲಿ ಯಾರ ಮಗ ಭಾಗಿಯಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಸಚಿವರು ರಾಜೀನಾಮೆ ನೀಡಬೇಕೆಂದು ಬಯಸುತ್ತೇವೆ. ನಾವು ಸಂಸತ್ತಿನಲ್ಲಿ ಚರ್ಚೆಯನ್ನು ಬಯಸುತ್ತೇವೆ. ಆದರೆ ಪ್ರಧಾನಿ ನಿರಾಕರಿಸುತ್ತಾರೆ. ಅವರು ಸಮರ್ಥನೆಗಳನ್ನು ಮಾಡುತ್ತಿದ್ದಾರೆ" ಎಂದು ರಾಹುಲ್ ಅವರು ಸಂಸತ್ತಿನ ಒಳಗೆ ಸುದ್ದಿಗಾರರಿಗೆ ತಿಳಿಸಿದರು.
ಲಖಿಂಪುರ ಖೇರಿ ಘಟನೆ ಚರ್ಚಿಸಲು ಸರಕಾರ ಸಿದ್ಧವಾಗಿಲ್ಲ: ಪ್ರಹ್ಲಾದ್ ಜೋಶಿ
ಪ್ರತಿಪಕ್ಷಗಳ ಪ್ರತಿಭಟನೆಯ ಕುರಿತು NDTVಯೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶಾಸಕಾಂಗ ಕಾರ್ಯವನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸುತ್ತಿರುವ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. "ಲಖಿಂಪುರ ಖೇರಿ ಘಟನೆ ಹಾಗೂ ಎಸ್‌ಐಟಿಯ ಅವಲೋಕನದ ಕುರಿತು ಚರ್ಚಿಸಲು ಸರಕಾರವು ಸಿದ್ಧವಾಗಿಲ್ಲ. ಏಕೆಂದರೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಘಟನೆಯ ಕುರಿತು ತನಿಖೆ ನಡೆಯುತ್ತಿದೆ... ವಿಷಯ ವಿಚಾರಣೆ ನಡೆಯುತ್ತಿದೆ. ಆದರೆ ಮಾತನಾಡಲು ಬೇರೆ ವಿಷಯಗಳಿವೆ. ಈ ಬಗ್ಗೆ ಚರ್ಚಿಸಲು ನಾನು ಪ್ರತಿಪಕ್ಷಗಳಿಗೆ ಮನವಿ ಮಾಡುತ್ತಿದ್ದೇನೆ. ನಾವು ತಪ್ಪು ಮಾಡಿದ್ದರೆ, ನಮಗೆ ರಚನಾತ್ಮಕ ಸಲಹೆಗಳನ್ನು ನೀಡಿ. . ನಾವು ಕೋವಿಡ್ ಬಗ್ಗೆ ಮಾತನಾಡಲು ಸಿದ್ಧರಿದ್ದೇವೆ..." ಅವರು ಹೇಳಿದರು.