ರಕ್ಷಣಾ ಸಿಬ್ಬಂದಿ ವರಿಷ್ಠರ ಸಮಿತಿಯ ಅಧ್ಯಕ್ಷರಾಗಿ ಜ.ನರವಣೆ ನೇಮಕ

ಹೊಸದಿಲ್ಲಿ,ಡಿ.16: ರಕ್ಷಣಾ ಸಿಬ್ಬಂದಿಯ ವರಿಷ್ಠರ ಸಮಿತಿ(ಸಿಓಎಸ್‌ಸಿ)ಯ ಅಧ್ಯಕ್ಷರಾಗಿ ಭೂಸೇನಾ ಮುಖ್ಯಸ್ಥ ಜ.ಎಂ.ಎಂ. ನರವಣೆ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ತಮಿಳುನಾಡಿನ ಕೂನೂರಿನಲ್ಲಿ ಕಳೆದ ವಾರ ಸಂಭವಿಸಿದ ಸೇನಾಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಸಿಬ್ಬಂದಿ ವರಿಷ್ಠ ಜ.ಬಿಪಿನ್ ರಾವತ್ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಹುದ್ದೆಯು ತೆರವಾಗಿತ್ತು.
ನರವಣೆ ಅವರು ಮೂರು ರಕ್ಷಣಾ ಪಡೆಗಳ ವರಿಷ್ಠರಲ್ಲಿ ಅತ್ಯಧಿಕ ಸೇವಾ ಹಿರಿತನ ಹೊಂದಿರುವುದರಿಂದ ಅವರನ್ನು ಸೇನಾ ಸಿಬ್ಬಂದಿ ವರಿಷ್ಠರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಾಯುಪಡೆ ವರಿಷ್ಠರಾಗಿ ಏರ್‌ಚೀಫ್ ಮಾರ್ಶಲ್ ವಿ.ಆರ್.ಚೌಧುರಿ ಈ ವರ್ಷದ ಸೆಪ್ಟೆಂಬರ್ 30 ನೌಕಾಪಡೆ ವರಿಷ್ಠರಾಗಿ ಆಡ್ಮಿರಲ್ ಆರ್. ಹರಿಕುಮಾರ್ ನವೆಂಬರ್ 30ರಂದು ಅಧಿಕಾರ ಸ್ವೀಕರಿಸಿದ್ದರು. ರಕ್ಷಣಾ ಸಿಬ್ಬಂದಿ ವರಿಷ್ಠ ಹುದ್ದೆಯನ್ನು ಸೃಷ್ಟಿಸುವುದಕ್ಕೆ ಮುನ್ನ , ಮೂರು ಸೇನಾ ಪಡೆಗಳ ವರಿಷ್ಠರಲ್ಲಿ ಅತ್ಯಧಿಕ ಸೇವಾ ಹಿರಿತನವಿರುವವರನ್ನು ಸೇನಾ ಸಿಬ್ಬಂದಿಯ ವರಿಷ್ಠರ ಸಮಿತಿ (ಸಿಓಎಸ್‌ಸಿ)ಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿತ್ತು.
ಮಂಗಳವಾರ ಸಭೆ ಸೇರಿದ ಸಿಓಎಸ್ಸಿಯು ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಜನರಲ್ ರಾವತ್, ಪತ್ನಿ ಮಧುಲಿಕಾ ಹಾಗೂ ಇತರ 11 ಮಂದಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿತ್ತು. ದುರಂತದಲ್ಲಿ ತೀವ್ರಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದ ಗ್ರೂಪ್ ಕ್ಯಾಪ್ಟನ್ ವರುಣ್‌ಸಿಂಗ್ ಮಂಗಳವಾರ ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದಿದ್ದರು.
ಸಿಓಎಸ್‌ಸಿ ಸಭೆಯ ಬಳಿಕ ಜನರಲ್ ನರವಣೆ ಅವರು ಸೌದಿ ಆರೇಬಿಯದ ಸಶಸ್ತ್ರ ಪಡೆಗಳ ಕಮಾಂಡರ್ ಲೆ.ಜ. ಫಾಹದ್ ಬಿನ್ ಅಬ್ದುಲ್ಲಾ ಅಲ್ ಮುತೈರ್ ಜೊತೆ ಮಾತುಕತೆ ನಡೆಸಿದರು. ದ್ವಿಪಕ್ಷೀಯ ರಕ್ಷಣಾ ಸಹಕಾರಕ್ಕೆಸಂಬಂಧಿಸಿದ ವಿಷಯಗಳನ್ನು ಮಾತುಕತೆಯ ಸಂದರ್ಭ ಚರ್ಚಿಸಲಾಯಿತೆಂದು ಅವರು ತಿಳಿಸಿದರು





