ಸಕ್ರಿಯ ರಾಜಕೀಯ ತ್ಯಜಿಸಿದ ಮೆಟ್ರೋ ಮ್ಯಾನ್ ಇ.ಶ್ರೀಧರನ್
"ವಿಧಾನಸಭೆ ಚುನಾವಣೆಯ ಸೋಲಿನಿಂದ ಪಾಠ ಕಲಿತಿದ್ದೇನೆ"

ಮಲ್ಲಪ್ಪುರಂ: ಮೆಟ್ರೋಮ್ಯಾನ್ ಖ್ಯಾತಿಯ ಇ. ಶ್ರೀಧರನ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಒಂದು ವರ್ಷದೊಳಗೆ ಸಕ್ರಿಯ ರಾಜಕೀಯವನ್ನು ತೊರೆದಿದ್ದಾರೆ.
ಶ್ರೀಧರನ್ ಅವರು ಗುರುವಾರ ಕೇರಳದ ಮಲಪ್ಪುರಂನಲ್ಲಿ ಈ ಕುರಿತು ಘೋಷಿಸಿದರು. ಎಪ್ರಿಲ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನಿಂದ ಪಾಠ ಕಲಿತಿದ್ದೇನೆ ಎಂದು ಹೇಳಿದರು.
"ನಾನು ಎಂದಿಗೂ ರಾಜಕಾರಣಿಯಾಗಿರಲಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿಲ್ಲ ಎಂದರೆ ನಾನು ರಾಜಕೀಯವನ್ನು ಬಿಟ್ಟುಬಿಡುತ್ತೇನೆ ಎಂದು ಅರ್ಥವಲ್ಲ. ನನಗೆ ಈಗ 90 ವರ್ಷ.. ನನಗೆ ಈಗ ರಾಜಕೀಯದ ಕನಸು ಇಲ್ಲ. ನನ್ನ ನೆಲದ ಸೇವೆ ಮಾಡಲು ನನಗೆ ರಾಜಕೀಯ ಅಗತ್ಯವಿಲ್ಲ. ನಾನು ಈಗಾಗಲೇ ಮೂರು ಟ್ರಸ್ಟ್‌ಗಳ ಮೂಲಕ ಅದನ್ನು ಮಾಡಿದ್ದೇನೆ’’ ಎಂದು ಶ್ರೀಧರನ್ ಹೇಳಿದರು.
ಇ.ಶ್ರೀಧರನ್ ಅವರು ಪಾಲಕ್ಕಾಡ್ ಕ್ಷೇತ್ರದಲ್ಲಿ ಹಾಲಿ ಶಾಸಕ ಶಾಫಿ ಪರಂಬಿಲ್ ವಿರುದ್ಧ 3,859 ಮತಗಳಿಂದ ಸೋತಿದ್ದಾರೆ. ಕೇರಳದಲ್ಲಿ ಕನಿಷ್ಠ 35 ಸ್ಥಾನಗಳಲ್ಲಿ ಗೆಲುವಿನ ಆಸೆಯಿಂದ ಎಪ್ರಿಲ್ 2 ರ ಅಸೆಂಬ್ಲಿ ಚುನಾವಣೆಯಲ್ಲಿ ಹೋರಾಡಿದ ಬಿಜೆಪಿ-ಎನ್‌ಡಿಎ ತನ್ನ ಏಕೈಕ ಸ್ಥಾನವಾದ ನೆಮೊಮ್ ಅನ್ನು ಉಳಿಸಿಕೊಳ್ಳಲೂ ವಿಫಲವಾಗಿತ್ತು. 'ಮೆಟ್ರೋಮ್ಯಾನ್' ಶ್ರೀಧರನ್ ಹಾಗೂ ಪಕ್ಷದ ರಾಜ್ಯ ಮುಖ್ಯಸ್ಥ ಕೆ ಸುರೇಂದ್ರನ್ ಸೇರಿದಂತೆ ಅದರ ಎಲ್ಲಾ ಪ್ರಮುಖ ಸ್ಪರ್ಧಿಗಳು ಸೋತಿದ್ದರು.





