ತಬ್ಲಿಘಿ ಜಮಾಅತ್ ಬಗ್ಗೆ ವೀಡಿಯೊ ಪೋಸ್ಟ್: ತಮಿಳುನಾಡಿನ ಯೂಟ್ಯೂಬರ್ ಮಾರಿದಾಸ್ ಮತ್ತೆ ಬಂಧನ

Photo: Twitter
ಚೆನ್ನೈ: ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ಎಫ್ಐಆರ್ ಅನ್ನು ರದ್ದುಗೊಳಿಸಿದ ಕೆಲವು ದಿನಗಳ ನಂತರ ತಮಿಳುನಾಡು ಪೊಲೀಸರು ಯೂಟ್ಯೂಬರ್ ಮಾರಿದಾಸ್ ಅವರನ್ನು ಮತ್ತೊಮ್ಮೆ ಬಂಧಿಸಿದ್ದಾರೆ. ಇಸ್ಲಾಮಿಕ್ ಸಂಘಟನೆ ತಬ್ಲಿಘಿ ಜಮಾಅತ್ ಕುರಿತು ವೀಡಿಯೊ ಪೋಸ್ಟ್ ಮಾಡಿದ್ದಕ್ಕಾಗಿ ಮಾರಿದಾಸ್ ಅವರನ್ನು ಬಂಧಿಸಲಾಗಿದೆ
ಮಾರಿದಾಸ್ ನ ಇತ್ತೀಚಿನ ಬಂಧನಕ್ಕೆ ಕಾರಣವಾದ ಎಫ್ಐಆರ್ ಅನ್ನು ತಿರುನ್ವೇಲಿ ಜಿಲ್ಲೆಯ ರಾಜಕಾರಣಿ ಕ್ಯಾಥರ್ ಮೀರಾನ್ ಅವರು ಎಪ್ರಿಲ್ 4, 2020 ರಂದು ದಾಖಲಿಸಿದ್ದಾರೆ. “ಭಯೋತ್ಪಾದನೆ + ಕೊರೋನಾ = ಭಾರತದ ಹೊಸ ಸಮಸ್ಯೆ/ತಬ್ಲೀಘಿ ಜಮಾಅತ್” ಎಂಬ ಶೀರ್ಷಿಕೆಯ ಮಾರಿದಾಸ್ ಅವರ ಯೂಟ್ಯೂಬ್ ವೀಡಿಯೊ ಪೋಸ್ಟ್ ಕುರಿತು ಮೀರಾನ್ ಪೊಲೀಸರನ್ನು ಸಂಪರ್ಕಿಸಿದರು.
ತಬ್ಲಿಘಿ ಜಮಾಅತ್ನಲ್ಲಿ ಭಾಗವಹಿಸಿದ ಮುಸ್ಲಿಮರನ್ನು ಭಯೋತ್ಪಾದಕರು ಎಂದು ಮಾರಿದಾಸ್ ಚಿತ್ರಿಸಿದ್ದಾರೆ ಹಾಗೂ ಕೋವಿಡ್ -19 ಅನ್ನು ಹರಡುವುದು ಅವರ ಉದ್ದೇಶವಾಗಿದೆ ಎಂದು ಮೀರಾನ್ ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಮಾರಿದಾಸ್ ಅವರನ್ನು ಬಂಧಿಸಿದ್ದಾರೆ. ತಿರುನೆಲ್ವೇಲಿ ಪೋಲೀಸರು ಅವರನ್ನು ಚೆನ್ನೈನಿಂದ ನೆಲ್ಲೈಗೆ ಕರೆ ತಂದಿದ್ದಾರೆ. ಪೊಲೀಸರು ದಾಸ್ ನನ್ನು ಇಂದು ನೆಲ್ಲೈ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.