ಕೊಲೆಯಾದ ಮಗಳು ಶೀನಾ ಬೋರಾ 'ಜೀವಂತವಾಗಿದ್ದಾಳೆ' ಎಂದ ಇಂದ್ರಾಣಿ ಮುಖರ್ಜಿ

ಹೊಸದಿಲ್ಲಿ: 2012ರಲ್ಲಿ ನಡೆದ ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ, ಆಕೆಯ ತಾಯಿ ಹಾಗೂ ಮಾಜಿ ಮಾಧ್ಯಮ ಎಕ್ಸಿಕ್ಯುಟಿವ್ ಇಂದ್ರಾಣಿ ಮುಖರ್ಜಿ ಅವರು ಸ್ಫೋಟಕ ಮಾಹಿತಿಯೊಂದನ್ನು ಹೊರಗೆಡಹಿದ್ದಾರೆ. ಸಿಬಿಐಗೆ ಪತ್ರ ಬರೆದಿರುವ ಇಂದ್ರಾಣಿ ತನ್ನ ಪುತ್ರಿ ಜೀವಂತವಾಗಿದ್ದಾರೆ ಹಾಗೂ ಈ ಕುರಿತು ತನಿಖೆ ನಡೆಸಿ ಎಂದು ಕೋರಿದ್ದಾರೆ.
ತಾನು ಭೇಟಿಯಾದ ಮಹಿಳಾ ಕೈದಿಯೊಬ್ಬರು ತಾವು ಶೀನಾ ಬೋರಾ ಅವರನ್ನು ಕಾಶ್ಮೀರದಲ್ಲಿ ನೋಡಿದ್ದಾಗಿ ಹೇಳಿದ್ದಾರೆ ಎಂದು ಇಂದ್ರಾಣಿ ಪತ್ರದಲ್ಲಿ ತಿಳಿಸಿದ್ದು ಈ ಪತ್ರವನ್ನು ನೇರವಾಗಿ ಸಿಬಿಐ ಮುಖ್ಯಸ್ಥರಿಗೆ ಸಲ್ಲಿಸಲಾಗಿದೆ. "ಆಕೆ ನೇರವಾಗಿ ಸಿಬಿಐಗೆ ಬರೆದಿದ್ದಾರೆ ಅದರಲ್ಲೇನು ಬರೆದಿದ್ದಾರೆಂದು ತಿಳಿದಿಲ್ಲ," ಎಂದು ಇಂದ್ರಾಣಿ ಅವರ ವಕೀಲೆ ಸಾನಾ ಖಾನ್ ಹೇಳಿದ್ದಾರಲ್ಲದೆ ಇಂದ್ರಾಣಿ ಅವರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇಂದ್ರಾಣಿ ತಮ್ಮ ಪುತ್ರಿ 25 ವರ್ಷದ ಶೀನಾ ಬೋರಾ ಕೊಲೆಗೆ ಸಂಬಂಧಿಸಿದಂತೆ 2015ರಿಂದ ಮುಂಬೈಯ ಬೈಕುಲ್ಲಾ ಕಾರಾಗೃಹದಲ್ಲಿದ್ದಾರೆ. ಇಂದ್ರಾಣಿಯ ಮೊದಲ ವಿವಾಹದಿಂದ ಹುಟ್ಟಿದ್ದ ಶೀನಾಳನ್ನು ಇಂದ್ರಾಣಿ ಹಲವಾರು ವರ್ಷಗಳ ಕಾಲ ತನ್ನ ಸಹೋದರಿಯೆಂದೇ ಎಲ್ಲರ ಬಳಿ ಹೇಳಿಕೊಂಡಿದ್ದರು.
ಆಕೆಯ ಬಂಧನದ ಮೂರು ತಿಂಗಳ ನಂತರ, ಆಗ ಆಕೆಯ ಪತಿಯಾಗಿದ್ದ ಈಗ ಮಾಜಿ ಪತಿಯಾಗಿರುವ ಪೀಟರ್ ಮುಖರ್ಜಿಯನ್ನು ಕೂಡ ಇಂದ್ರಾಣಿಗೆ ಸಹಕರಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಆದರೆ ತನ್ನ ಮಗಳು ಬದುಕಿದ್ದಾಳೆ ಎಂದು ಆಕೆ ಹೇಳುತ್ತಿರುವುದನ್ನು ತನಿಖಾಕಾರರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.
ಇಂದ್ರಾಣಿ ತನ್ನ ಚಾಲಕ ಶ್ಯಾಮವರ್ ರಾಯ್ ಮತ್ತು ಎರಡನೇ ಪತಿ ಸಂಜೀವ್ ಖನ್ನಾ ಜತೆಗೂಡಿ ಶೀನಾಳನ್ನು ಕೊಲೆ ಮಾಡಿದ್ದರೆಂದು ಆರೋಪಿಸಲಾಗಿದೆ. ಪೀಟರ್ ಮುಖರ್ಜಿಯ ಮೊದಲನೇ ಹೆಂಡತಿಯ ಪುತ್ರ ರಾಹುಲ್ ಜತೆಗೆ ಶೀನಾಗೆ ಇದ್ದ ಸಂಬಂಧದಿಂದ ಸಿಟ್ಟುಗೊಂಡು ಇಂದ್ರಾಣಿ ಈ ಕೃತ್ಯವೆಸಗಿದ್ದಾರೆಂದು ಹೇಳಲಾಗಿದೆ. ಕೊಲೆ ನಂತರ ಪುತ್ರಿ ಅಮೆರಿಕಾಗೆ ಹೋಗಿದ್ದಾಳೆಂದು ಇಂದ್ರಾಣಿ ಎಲ್ಲರೊಡನೆ ಹೇಳಿದ್ದಳು.
ಮೂರು ವರ್ಷಗಳ ನಂತರ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು ಹಾಗೂ ಶೀನಾಳದ್ದೆಂದು ತಿಳಿಯಲಾದ ಅರೆಬೆಂದ ದೇಹವನ್ನು ಮುಂಬೈ ಸಮೀಪದ ಅರಣ್ಯದಲ್ಲಿ ಪತ್ತೆಯಾಗಿತ್ತು. ಚಾಲಕನನ್ನು ನಂತರ ಬಂಧಿಸಲಾಗಿತ್ತು. ಜೈಲಿನಲ್ಲಿರುವಾಗಲೇ ಇಂದ್ರಾಣಿ ಮತ್ತು ಪೀಟರ್‍ಗೆ ವಿಚ್ಛೇದನ ದೊಕಿತ್ತು, ಪೀಟರ್‍ಗೆ 2020ರಲ್ಲಿ ಜಾಮೀನು ದೊರಕಿತ್ತು.