ಶಿವಮೊಗ್ಗ: ಮತಾಂತರ ನಿಷೇಧ ಕಾಯ್ದೆಗೆ ಬಿಎಸ್ಪಿ ವಿರೋಧ
ಶಿವಮೊಗ್ಗ : ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಹೊರಟಿರುವುದನ್ನು ಬಹುಜನ ಸಮಾಜ ಪಾರ್ಟಿ ಖಂಡಿಸುತ್ತದೆ ಎಂದು ಜಿಲ್ಲಾ ಅಧ್ಯಕ್ಷ ಎ.ಡಿ.ಶಿವಪ್ಪ ಹೇಳಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನಿನ ಅನ್ವಯ ಆಮಿಷ ಮತ್ತು ಬಲವಂತದ ಮತಾಂತರದ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೂ ಹೊಸ ಕಾಯ್ದೆ ಜಾರಿ ಮಾಡಲು ಹೊರಟಿರುವುದು ಜನರನ್ನು ದಿಕ್ಕುತಪ್ಪಿಸುವ ಕುತಂತ್ರವಾಗಿದೆ ಎಂದರು.
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ, ಇತರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ರಾಜ್ಯದ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೋರೋನ ನಿಯಂತ್ರಣದ ವೈಫಲ್ಯ, ಹಾಸಿಗೆ, ವೆಂಟಿಲೇಟರ್ ಮತ್ತು ಔಷ ಖರೀದಿ ಹಗರಣ, ಪ್ರವಾಹ ಪೀಡಿತರಿಗೆ ಸೂಕ್ತ ನೆರವು ಒದಗಿಸಲು ವಿಫಲ, ಗುತ್ತಿಗೆಯಲ್ಲಿ ಶೇಕಡಾ 40 ಪರ್ಸೆಂಟ್ ಕಮಿಷನ್, ಬಿಟ್-ಕಾಯಿನ್ ಹಗರಣ,ಅಲ್ಲದೇ ಚರ್ಚುಗಳ ಮೇಲೆ, ಕ್ರಿಶ್ಚಿಯನ್ ಸಮುದಾಯದವರ ಮೇಲೆ ದಾಳಿ ಹೀಗೆ ಎಲ್ಲವೂ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಸರ್ಕಾರದ ವೈಫಲ್ಯಗಳು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದ್ದರಿಂದ ಬಿಬಿಎಂಪಿ, ಜಿಪಂ-ತಾಪಂ ಚುನಾವಣೆಯನ್ನ ಮುಂದೂಡುತ್ತಾ ಬರಲಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಭಯದಿಂದ ಜನರನ್ನು ದಿಕ್ಕುತಪ್ಪಿಸಲು ಮತಾಂತರ ಹಾಗೂ ಲವ್ ಜಿಹಾದ್ ನಂತಹ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಹೇಳಿದರು.
ಬಸವಣ್ಣನವರ ಅನುಭವ ಮಂಟಪದ ತವರೂರಾದ ಕರ್ನಾಟಕ ಎಂದೂ ಸಹ ಕೋಮುವಾದಕ್ಕೆ ಆಸ್ಪದ ನೀಡಿಲ್ಲ. ಮಾನವ ತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿರುವ ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಇದೆ. ಯಾರು ಯಾವ ಧರ್ಮವನ್ನು ಬೇಕಾದರೂ ಒಪ್ಪಿಕೊಳ್ಳುವ, ಪ್ರಚಾರಮಾಡುವ ಅಥವಾ ತಿರಸ್ಕರಿಸುವ ಹಕ್ಕನ್ನು ನೀಡಲಾಗಿದೆ ಎಂದರು.
ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ಜನರನ್ನು ದಿಕ್ಕು ತಪ್ಪಿಸಲು ಹಾಗೂ ದಲಿತ-ಹಿಂದುಳಿದ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಸಾಮರಸ್ಯಕ್ಕೆ ಬೆಂಕಿ ಹಚ್ಚಲು ಇಂತಹ ಸಂವಿಧಾನ ಬಾಹಿರ ಕಾಯ್ದೆಗಳ ಮೊರೆ ಹೋಗಿವೆ. ಬಿಜೆಪಿ ಸರ್ಕಾರದ ಈ ಕುತಂತ್ರವನ್ನು ಬಹುಜನ ಸಮಾಜ ಪಾರ್ಟಿ ಖಂಡಿಸುತ್ತದೆ. ಈ ಕಾಯ್ದೆ ವಿರುದ್ಧ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಪ್ರಕಟಣೆಯಲ್ಲಿ ಹೇಳಿದ್ದಾರೆ.







