"ಜಮ್ಮು, ಕಾಶ್ಮೀರ, ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಹುದ್ದೆಯಿಂದ ಕೈಬಿಡಿ": ರಾಷ್ಟ್ರಪತಿಗೆ ಯೆಚೂರಿ ಪತ್ರ

Photo : twitter.com/SitaramYechury
ಹೊಸದಿಲ್ಲಿ: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರನ್ನು ಹುದ್ದೆಯಿಂದ ಕೈಬಿಡಬೇಕೆಂದು ಕೋರಿದ್ದಾರೆ.
ಸಂವಿಧಾನದ ಮುನ್ನುಡಿಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಎಂಬ ಪದಗಳ ಸೇರ್ಪಡೆಯು ಭಾರತದ ಆಧ್ಯಾತ್ಮಿಕ ಇಮೇಜ್ ಅನ್ನು ಕಡಿಮೆಗೊಳಿಸಿದೆ ಎಂದು ಹೇಳುವ ಮೂಲಕ ಜಸ್ಟಿಸ್ ಮಿತ್ತಲ್ ಅವರು ಪ್ರತಿಜ್ಞಾವಿಧಿಯನ್ನು ಉಲ್ಲಂಘಿಸಿದ್ದಾರೆ ಹಾಗೂ ತಾವು ಹೊಂದಿರುವ ಸಂವಿಧಾನಾತ್ಮಕ ಹುದ್ದೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆಂದು ಯೆಚೂರಿ ಆರೋಪಿಸಿದ್ದಾರೆ.
ಕೆಲವೊಮ್ಮೆ ತಿದ್ದುಪಡಿಗಳನ್ನು ನಮ್ಮ ಹಠದಿಂದಾಗಿ ನಾವು ತರುತ್ತೇವೆ ಎಂದೂ ಅವರು ಎಬಿವಿಪಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಹೇಳಿರುವುದು ಮಾಧ್ಯಮದಲ್ಲಿ ವರದಿಯಾಗಿವೆ ಎಂದು ಯೆಚೂರಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೊಬ್ಬರು ದೇಶದ ಸಂವಿಧಾನದ ವಿರುದ್ಧ ಈ ರೀತಿಯ ಹೇಳಿಕೆಯನ್ನು ಒಂದು ನಿರ್ದಿಷ್ಟ ಸಿದ್ಧಾಂತವನ್ನು ಹೊಂದಿದ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಯೆಚೂರಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರಲ್ಲದೆ ಸಂವಿಧಾನದ ಪಾವಿತ್ರ್ಯವನ್ನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡಲು ಜಸ್ಟಿಸ್ ಮಿತ್ತಲ್ ಅವರನ್ನು ಹುದ್ದೆಯಿಂದ ಕೈಬಿಡಬೇಕೆಂದು ಕೋರಿದ್ದಾರೆ.