ಉಡುಪಿ: ಮೂವರಿಗೆ ಕೋವಿಡ್ ಪಾಸಿಟಿವ್
![ಉಡುಪಿ: ಮೂವರಿಗೆ ಕೋವಿಡ್ ಪಾಸಿಟಿವ್ ಉಡುಪಿ: ಮೂವರಿಗೆ ಕೋವಿಡ್ ಪಾಸಿಟಿವ್](https://www.varthabharati.in/sites/default/files/images/articles/2021/12/16/317891-1639661395.jpg)
ಉಡುಪಿ, ಡಿ.16: ಜಿಲ್ಲೆಯಲ್ಲಿ ಗುರುವಾರ ಮೂವರು ಕೋವಿಡ್-19ಕ್ಕೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ನಾಲ್ವರು ರೋಗದಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ 28 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಪಾಸಿಟಿವ್ ಬಂದವರಲ್ಲಿ ಒಬ್ಬರು ಪುರುಷ ಹಾಗೂ ಇಬ್ಬರು ಮಹಿಳೆ ಯಾಗಿದ್ದಾರೆ. ಇವರಲ್ಲಿ ಒಬ್ಬರು ಉಡುಪಿ ತಾಲೂಕಿನವರಾದರೆ, ಇಬ್ಬರು ಕಾರ್ಕಳದವರು. ಒಬ್ಬರಿಗೆ ಆಸ್ಪತ್ರೆ ಹಾಗೂ ಇಬ್ಬರಿಗೆ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.
ಬುಧವಾರ ಸೋಂಕಿನಿಂದ ನಾಲ್ವರು ಗುಣಮುಖರಾಗುವ ಮೂಲಕ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,462ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3897 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,967ಕ್ಕೇರಿದೆ.
1,130 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 1,130 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 196 ಮಂದಿ ಮೊದಲ ಡೋಸ್ ಹಾಗೂ 934 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 138 ಮಂದಿ ಮೊದಲ ಡೋಸ್ ಹಾಗೂ 617 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 58 ಮಂದಿ ಮೊದಲ ಡೋಸ್ ಹಾಗೂ 316 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ ಒಬ್ಬರು ಮುಂಚೂಣಿ ಕಾರ್ಯಕರ್ತರು ಸಹ ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.