ಮತಾಂತರ ನಿಷೇಧ ಮಸೂದೆ ಮಂಡನೆ: ಡಿ.20ರ ಸಂಪುಟ ಸಭೆಯಲ್ಲಿ ತೀರ್ಮಾನ ಸಾಧ್ಯತೆ

ಬೆಳಗಾವಿ , ಡಿ. 16: ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಮತಾಂತರ ನಿಷೇಧ ವಿಧೇಯಕವನ್ನು ವಿಧಾನ ಮಂಡಲ ಉಭಯ ಸದನಗಳಲ್ಲಿ ಮಂಡಿಸುವ ಕುರಿತು ಚರ್ಚಿಸಲು ಡಿ.20ರಂದು ಸಚಿವ ಸಂಪುಟ ಸಭೆ ಕರೆಯಲಾಗಿದೆ.
ಡಿ.20ರ ಸೋಮವಾರ ಮಧ್ಯಾಹ್ನ 1:30ಕ್ಕೆ ಸುವರ್ಣ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಚಿವ ಸಂಪುಟ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯಲಿದೆ.
ಗೊಂದಲ: ಆಮಿಷ ಮತ್ತು ಬಲವಂತದ ಮತಾಂತರಕ್ಕೆ ನಿಷೇಧ ಹೇರುವುದರ ಜೊತೆಗೆ ಮತಾಂತರ ಮಾಡುವವರಿಗೆ ಕನಿಷ್ಠ 3 ವರ್ಷದಿಂದ 5 ವರ್ಷಗಳ ಕಾಲ ಶಿಕ್ಷೆ, 25 ಸಾವಿರ ರೂ.ದಂಡ ಹಾಗೂ ಸಾಮೂಹಿಕ ಮತಾಂತರ ಮಾಡುವವರಿಗೆ 3ರಿಂದ 10 ವರ್ಷಗಳ ಕಾರಾಗೃಹ ಶಿಕ್ಷೆ, 1ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ವಿಧೇಯಕ-2021’ವನ್ನು ಮಂಡಿಸಲು ಸರಕಾರ ಸಿದ್ಧತೆ ನಡೆಸಿದೆ ಎಂದು ಗೊತ್ತಾಗಿದೆ.
ವಿಶ್ವಾಸನೀಯ ಮೂಲಗಳ ಪ್ರಕಾರ ಉದ್ದೇಶಿತ ಮಸೂದೆ ಮಂಡನೆ ಡಿ.22 ಅಥವಾ 23ರಂದು ಮಂಡಿಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ. ಆದರೆ, ಮತಾಂತರ ನಿಷೇಧ ಮಸೂದೆ ಮಂಡನೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಹೀಗಾಗಿ ಮಸೂದೆ ಮಂಡಿಸುವ ವಿಚಾರಕ್ಕೆ ಗೊಂದಲ ಏರ್ಪಟ್ಟಿದೆ.
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಲೇಬೇಕೆಂದು ಪಕ್ಷದ ಕೆಲ ಶಾಸಕರು ಪಟ್ಟು ಹಿಡಿದಿದ್ದರೆ, ಕೆಲ ಶಾಸಕರು ಇನ್ನೂ ಕೆಲ ದಿನಗಳ ಕಾಲ ಈ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗಲಿ. ಆ ಬಳಿಕ ಬೆಂಗಳೂರಿನಲ್ಲಿ ಜನವರಿ ವೇಳೆಗೆ ನಡೆಯಲಿರುವ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಮಸೂದೆ ಮಂಡಿಸಬೇಕೆಂದು ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಧೇಯಕದ ಕರಡು ಈಗಾಗಲೇ ಸಿದ್ಧವಾಗಿದ್ದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಪರಿಶೀಲನೆ ಬಳಿಕ ಕಾನೂನು ಇಲಾಖೆ ಕಾರ್ಯದರ್ಶಿಯವರಿಗೆ ರವಾನಿಸಿದ್ದಾರೆ. ವಿಧೇಯಕಕ್ಕೆ ಸಂಬಂಧಿಸಿದಂತೆ ಶಾಸಕರಲ್ಲೇ ಪರ-ವಿರೋಧ ಅಭಿಪ್ರಾಯದ ಹಿನ್ನೆಲೆಯಲ್ಲಿ ಸಿಎಂ ಸಂಪುಟ ಸಭೆಯಲ್ಲಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.







