ಉಡುಪಿ: ರಿಕ್ಷಾ ಮೀಟರ್ ದರ ಹೆಚ್ಚಿಸಲು ಮನವಿ

ಉಡುಪಿ, ಡಿ.16: ಉಡುಪಿ ಜಿಲ್ಲೆಯಲ್ಲಿ ಸುಮಾರು 2 ವರ್ಷಗಳ ಹಿಂದೆ ರಿಕ್ಷಾ ಕನಿಷ್ಟ ಮೀಟರ್ ದರ ಮತ್ತು ರನ್ನಿಂಗ್ ಕಿ.ಮೀ.ದರ ನಿಗದಿ ಮಾಡಿದ್ದು, ಈಗ ಪೆಟ್ರೋಲ್, ಡೀಸೆಲ್, ಗ್ಯಾಸ್, ಇನ್ಸೂರೆನ್ಸ್ ಪ್ರೀಮಿಯಂ, ವಾಹನ ಬಿಡಿ ಭಾಗಗಳ ಬೆಲೆ ವಿಪರೀತ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದರ ಪುರ್ನ ವಿಮರ್ಶೆ ಮಾಡಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಅರ್ಪಿಸಲಾಯಿತು.
ಈ ಅವಧಿಯಲ್ಲಿ ಬಸ್ ದರವನ್ನು 2 ಬಾರಿ ಹೆಚ್ಚಿಸಿದರೂ ರಿಕ್ಷಾ ದರವನ್ನು ಒಮ್ಮೆ ಸಹ ಹೆಚ್ಚಿಸಿಲ್ಲದಿರುವುದನ್ನು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಸಿಐಟಿಯುಗೆ ಸೇರಿದ ಕುಂದಾಪುರ ಮತ್ತು ಬ್ರಹ್ಮಾವರ ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಮುಖಂಡರಾದ ಲಕ್ಷ್ಮಣ್, ರಾಜು ದೇವಾಡಿಗ, ರಮೇಶ್, ನರಸಿಂಹ ಬಿ, ಸದಾಶಿವ ಪೂಜಾರಿ, ಅರವಿಂದ ದೇವಾಡಿಗ, ಸೂರ್ಯ ಪೂಜಾರಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕ್ರಷ್ಣ ಶೆಟ್ಟಿ ಮೊದಲಾದವರು ನಿಯೋಗದಲ್ಲಿದ್ದರು.ಭಾಗವಹಿಸಿದ್ದರು.
ಕಳೆದ ಸೆ.14ರಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಸಾರಿಗೆ ಅಧಿಕಾರಿ ಗಳಿಗೆ ಈ ಕುರಿತು ಮನವಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲದ ಹಿನ್ನೆಲೆಯಲ್ಲಿ ಇಂದು (ಡಿ.16) ಪುನ: ಮನವಿ ನೀಡಿದ್ದು, ಇದಕ್ಕೂ ಸ್ಪಂದಿಸದೆ ಇದ್ದಲ್ಲಿ ಜನವರಿ ತಿಂಗಳಲ್ಲಿ ತಾಲೂಕುವಾರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ.







