ಯೋಧ ವರುಣ್ ಸಿಂಗ್‍ಗೆ ಉಭಯ ಸದನಗಳಲ್ಲಿ ಸಂತಾಪ

ಬೆಳಗಾವಿ, ಡಿ.16: ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಯೋಧ ವರುಣ್ ಸಿಂಗ್ ಅವರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು.
ಗುರುವಾರ ಪರಿಷತ್ತಿನ ಕಲಾಪ ಆರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪ್ರಸ್ತಾಪಿಸಿ, ಭಾರತದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನರಾದುದನ್ನು ಈ ಸದನಕ್ಕೆ ತಿಳಿಸಲು ವಿಷಾಧಿಸುತ್ತೇನೆ ಎಂದರು.
ಡಿ.8ರಂದು ನೀಲಗಿರಿ ಕಾನನದಲ್ಲಿ ಘಟಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡು ಬದುಕುಳಿದಿದ್ದ ಭಾರತದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಡಿ.15ರಂದು ನಿಧನ ಹೊಂದಿರುತ್ತಾರೆ.
ಉತ್ತರ ಪ್ರದೇಶದ ಕನೋಳಿ ಗ್ರಾಮದಲ್ಲಿ ಜನಿಸಿದ್ದ ಇವರು, ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಚಂಡೀಗಢದಲ್ಲಿ ಪೂರೈಸಿದ ನಂತರ 2004ರಲ್ಲಿ ಎನ್‍ಡಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಟೆಸ್ಟ್ ಪೈಲಟ್ ಆಗಿ ವಾಯುಪಡೆಗೆ ನೇಮಕಗೊಂಡಿದ್ದರು. 2017ರಲ್ಲಿ ವಿಂಗ್ ಕಮಾಂಡರ್ ಆಗಿ ತಮಿಳುನಾಡಿನ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನಲ್ಲಿ ಡೈರೆಕ್ಟಿಂಗ್ ಸ್ಟಾಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ದೇಶಕ್ಕೆ ಹೆಮ್ಮೆಯ, ಶೌರ್ಯದ ಮತ್ತು ಪರಮೋನ್ನತ ವೃತ್ತಿಪರತೆಯ ಸೇವೆ ಸಲ್ಲಿಸಿದ್ದ ವರುಣ್ ಸಿಂಗ್ ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದರು.
ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವೀರ ಯೋಧ ಗ್ರೂಪ್ ಕ್ಯಾಪ್ಟನ್ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿರುವುದು ದುಃಖಕರ ಸಂಗತಿ. ರಾಷ್ಟ್ರವು ಹಿರಿಯ ವೀರ ಯೋಧರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ನುಡಿದರು.
ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮತ್ತಿತರರು ಸದನದಲ್ಲಿ ಸಂತಾಪ ಸೂಚಿಸಿದರು.







