ಮಧ್ಯಪ್ರದೇಶದಲ್ಲಿ ಗ್ರಾಮ ಸರಪಂಚ ಹುದ್ದೆ 44 ಲಕ್ಷ ರೂ.ಗೆ ಹರಾಜು!
ಭೋಪಾಲ್,ಡಿ.16: ಗ್ರಾಮಪಂಚಾಯತ್ ಸರಪಂಚ ಹುದ್ದೆಯನ್ನು ಹರಾಜಿನಲ್ಲಿ ಹಾಕಿದ ಘಟನೆ ಮಧ್ಯಪ್ರದೇಶದ ಭಟೌಲಿ ಗ್ರಾಮದಲ್ಲಿ ನಡೆದಿದೆ. 44 ಲಕ್ಷ ರೂ.ಗೆ ಬಿಡ್ ಮಾಡಿದ ವ್ಯಕ್ತಿ ಆ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಚುನಾವಣೆಯ ಬದಲಿಗೆ ಹರಾಜು ನಡೆಸುವುದರಿಂದ ಗ್ರಾಮಪಂಚಾಯತ್ ಸರಪಂಚರ ಹುದ್ದೆಯ ಆಕಾಂಕ್ಷಿ ಅಭ್ಯರ್ಥಿಗಳ ನಡುವೆ ಯಾವುದೇ ಉದ್ವಿಗ್ನತೆ ಉಂಟಾಗುವುದಿಲ್ಲವೆಂಬ ತೀರ್ಮಾನಕ್ಕೆ ಎಲ್ಲಾ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದ್ದರು.
ಭಾಗ್ ಸಿಂಗ್ ಯಾದವ್ 44 ಲಕ್ಷ ರೂ. ಬಿಡ್ ಮಾಡುವ ಮೂಲಕ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದು ಆ ಮೂಲಕ ತನ್ನ ಎದುರು ಪೈಪೋಟಯಲ್ಲಿದ್ದ ಎಲ್ಲಾ ನಾಲ್ವರು ಅಭ್ಯರ್ಥಿಗಳನ್ನು ಪರಾಭವಗೊಳಿಸಿದ್ದಾರೆ. ಆದಾಗ್ಯೂ ಸ್ಥಳೀಯಾಡಳಿತವು ಹರಾಜಿನಲ್ಲಿ ಸರಪಂಚರನ್ನು ಆಯ್ಕೆ ಮಾಡಿರುವುದನ್ನು ತಾನು ಒಪ್ಪಿಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದೆ ಹಾಗೂ ನೂತನ ಸರಪಂಚರ ಆಯ್ಕೆಗಾಗಿ ಚುನಾವಣೆ ನಡೆಸಲಾಗುವುದೆಂದು ತಿಳಿಸಿದೆ.
ರಾಜಧಾನಿ ಭೋಪಾಲದಿಂದ ವಾಹನದಲ್ಲಿ ಕೇವಲ ನಾಲ್ಕು ತಾಸುಗಳ ಪ್ರಯಾಣದಷ್ಟು ದೂರಪವಿರುವ ಭಟೌಲಿ ಗ್ರಾಮದಲ್ಲಿ ದೇವಾಲಯದ ಬಹಿರಂಗವಾಗಿ ಈ ಹರಾಜನ್ನು ನಡೆಸಲಾಗಿತ್ತು. 21 ಲಕ್ಷ ರೂ.ಗಳೊಂದಿಗೆ ನಡೆದ ಹರಾಜಿನ ಮೌಲ್ಯವು 43 ಲಕ್ಷ ರೂ.ವರೆಗೆ ತಲುಪಿತ್ತು.