ಬ್ಯಾಂಕ್ ಖಾಸಗೀಕರಣ ದೇಶದ ಹಿತಕ್ಕೆ ವಿರುದ್ಧ: ವಿನ್ಸೆಂಟ್ ಡಿಸೋಜ

ಮಂಗಳೂರು, ಡಿ.16: ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ನೀತಿ ದೇಶದ ಹಿತಕ್ಕೆ ವಿರುದ್ಧವಾಗಿದೆ. ಇದನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿ ಈ ನೀತಿಯನ್ನು ಕೈಬಿಡುವಂತೆ ಕೇಂದ್ರ ಸರಕಾರದ ಜತೆ ಮೂರು ಸುತ್ತಿನ ಮಾತಕತೆ ನಡೆಸಿದರೂ ಇದಕ್ಕೆ ಸ್ಪಂದಿಸದೆ ಹಠಮಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ( ಯುಎ್ಬಿಯು)ಸಂಚಾಲಕ ವಿನ್ಸೆಂಟ್ ಡಿಸೋಜ ಹೇಳಿದರು.
ಬ್ಯಾಂಕ್ ನೌಕರರ, ಅಧಿಕಾರಿಗಳ ವಿವಿಧ ಸಂಘಟನೆಗಳಿಗೆ ಸೇರಿದ ನೌಕರರು ಅಧಿಕಾರಿಗಳು ಭಾಗವಹಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಹಾಗೂ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ -2021ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ಕರೆಯಂತೆ ನಗರದ ಹ್ಯಾಮಿಲ್ಟನ್ ವೃತ್ತದ ಬಳಿಯ ಸ್ಟೇಟ್‌ಬ್ಯಾಂಕ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ದೇಶದಾದ್ಯಂತ ಸುಮಾರು 10 ಲಕ್ಷ ಮಂದಿ ಬ್ಯಾಂಕ್ ಸಿಬ್ಬಂದಿ ಎರಡು ದಿನಗಳ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಸುರೇಶ್ ಹೆಗ್ಡೆ ಅವರು ಮಾತನಾಡಿ ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ನೀತಿಯಿಂದ ಆನೇಕ ಶಾಖೆಗಳು ಮುಚ್ಚುವ ಅಪಾಯದಲ್ಲಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. ಆರ್ಥಿಕ ಕ್ಷೇತ್ರವೂ ಹಿನ್ನಡೆಯಲ್ಲಿದೆ.ಈ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುತ್ತಿದೆ ಎಂಬುದಕ್ಕೆ ಉತ್ತರ ಹೇಳಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಹಾಗೂ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ -2021ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ಕರೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇಂದು ಬ್ಯಾಂಕ್‌ಗಳು ಮುಷ್ಕರದಲ್ಲಿ ಪಾಲ್ಗೊಂಡವು.
ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಎಲ್ಲಾ ಶಾಖೆಗಳಲ್ಲಿ ಹಣ ವರ್ಗಾವಣೆ, ಸ್ವೀಕೃತಿ, ಸಾಲ ಮಂಜೂರಾತಿ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಬ್ಯಾಂಕಿಂಗ್ ಸೇವೆ ಇಂದು ಸ್ಥಗಿತಗೊಂಡಿತ್ತು. ಆದರೆ ಇಂಟರ್‌ನೆಟ್ ಬ್ಯಾಂಕಿಂಗ್, ಎಟಿಎಂ ಮುಂತಾದುವುಗಳ ಮೂಲಕ ಬ್ಯಾಂಕಿಂಗ್ ವ್ಯವಹಾರಕ್ಕೆ ಅವಕಾಶವಿದ್ದು, ಖಾಸಗಿ ಕ್ಷೇತ್ರದ ಕೆಲವು ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿವೆ.
ಶ್ರೀಧರ್, ಬಿ.ಎಂ.ಮಾಧವ ಮೊದಲಾದವರು ಮಾತನಾಡಿ ಕೇಂದ್ರ ಸರಕಾರದ ಸಾರ್ವಜನಿಕ ರಂಗದ ಬ್ಯಾಂಕ್ ವಿರೋಧಿ ನೀತಿ ಖಂಡನಿಯ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂದಿಗಳು ಸ್ಟೇಟ್‌ಬ್ಯಾಂಕ್ ಕಚೇರಿ ಮುಂದುಗಡೆ ಸೇರಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಮುಖಂಡರಾದ ಗೀತಾ, ರಾಘವ ಮುಂತಾದವರು ಉಪಸ್ಥಿತರಿದ್ದರು.
ಮುಷ್ಕರದ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳಲ್ಲಿ ಯಾವುದೇ ಬ್ಯಾಂಕ್ ವ್ಯವಹಾರ ನಡೆಯಲಿಲ್ಲ. ಶುಕ್ರವಾರವೂ ಬ್ಯಾಂಕ್ ಮುಷ್ಕರ ಮುಂದುವರಿಯಲಿದೆ.












