ಉಪ್ಪಿನಂಗಡಿ; ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: 10 ಮಂದಿ ಆರೋಪಿಗಳ ಬಂಧನ

ಫೈಲ್ ಫೋಟೊ
ಉಪ್ಪಿನಂಗಡಿ: ಇತ್ತೀಚೆಗೆ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನೆಯ ಸಂದರ್ಭ ನಡೆದ ಸಾರ್ವಜನಿಕ ಶಾಂತಿ ಭಂಗ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕೋವಿಡ್ ನಿಯಮಾವಳಿ ಉಲ್ಲಂಘನೆ, ಕೊಲೆಯತ್ನ ಮತ್ತಿತರ ಪ್ರಕರಣಕ್ಕೆ ಸಂಬಂಧಿಸಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದು, ಅದರಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಓಮನ ಎನ್.ಕೆ. ದೂರು ನೀಡಿದ್ದು, ಪಿಎಫ್ಐ ಸಂಘಟನೆಯ ಮುಖಂಡರಾದ ಝಕಾರಿಯ, ಮುಸ್ತಾಫರವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಆರೋಪಿತರು ಏಕಾಎಕಿಯಾಗಿ ಯಾವುದೇ ಅನುಮತಿ ಪಡೆಯದೆ ಅಕ್ರಮ ಕೂಟ ಸೇರಿಕೊಂಡು ಪೊಲೀಸ್ ಠಾಣೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಸಾರ್ವಜನಿಕರ, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಾ, ಸಂಜೆ 6 ಗಂಟೆಯ ಸುಮಾರಿಗೆ ಆರೋಪಿಗಳು ಠಾಣೆಗೆ ಪ್ರವೇಶಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಳ್ಳಿ ಅವರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಲ್ಲದೆ, ಯಾವುದೇ ಮಾಸ್ಕ್ ಧರಿಸದೆ ಸರಕಾರವು ಹೊರಡಿಸಿದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಲಂ: 143.147. 151 341 353 269 270 ಜೊತೆಗೆ 149 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಯತ್ನ, ಮಾನಭಂಗ ಯತ್ನ ಪ್ರಕರಣ: ಎರಡನೇ ದೂರು ನೀಡಿರುವ ಉಪ್ಪಿನಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಓಮನ ಎನ್.ಕೆ. ಅವರು, 144 ಸೆಕ್ಷನ್ ಜಾರಿಯಲ್ಲಿದ್ದರೂ ಪೊಲೀಸ್ ಠಾಣೆಯ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಿದ್ದ ಗುಂಪು ಪೊಲೀಸ್ ಠಾಣೆಯ ಒಳಗೆ ಏಕಾಏಕಿ ನುಗ್ಗಲು ಪ್ರಯತ್ನಿಸಿದ್ದು, ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ನನಗೆ ಹಲ್ಲೆ ನಡೆಸಿ, ಸಮವಸ್ತ್ರವನ್ನು ಹರಿದು ಹಲ್ಲೆ ನಡೆಸಿರುವುದಲ್ಲದೆ, ಮಾನಭಂಗಕ್ಕೆ ಯತ್ನಿಸಿ ಕೊಲೆಯತ್ನ ನಡೆಸಿದ್ದಾರೆ. ಅಲ್ಲದೇ, ಇದೇ ಸಂದರ್ಭ ನನ್ನ ಜೊತೆ ಕರ್ತವ್ಯದಲ್ಲಿದ್ದ ರೇಣುಕಾ ಹಾಗೂ ಇತರ ಪೊಲೀಸರಿಗೆ, ಅವರ ಮೇಲಾಧಿಕಾರಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಆರೋಪಿಗಳ ವಿರುದ್ಧ ಕಲಂ:143,147,151,341,354,332,353,427,307,269,270 ಜೊತೆಗೆ 149 ಭಾದಂಸಂ ಮತ್ತು ಕಲಂ:2(ಎ), ಕೆಪಿಡಿಎಲ್ ಪಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧನ: ಕೊಲೆಯತ್ನ ಹಾಗೂ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಆರೋಪಿಗಳಾದ ಮಹಮ್ಮದ್ ತಾಹಿರ್, ಸ್ವಾದಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್ ಫೈಝಲ್, ಮಹಮ್ಮದ್ ಹನೀಫ್, ಎನ್. ಖಾಸಿಂ, ಮಹಮ್ಮದ್ ಆಸಿಫ್, ತುಫೈಲ್ ಮಹಮ್ಮದ್ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಪ್ರಸನ್ನ ಕುಮಾರ್ ಎಂಬವರು ದೂರು ನೀಡಿದ್ದು, ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿ, ಠಾಣೆಯೊಳಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸನ್ನಿವೇಶ ಅರಿತು ರಾತ್ರಿ 9:30ರ ಸುಮಾರಿಗೆ ಅವರನ್ನು ಚದುರಿಸಲು ನಾನು ಸೇರಿದಂತೆ ಬಂದೋಬಸ್ತ್ ನಲ್ಲಿ ನಿರತರಾಗಿದ್ದ ಇತರರು ತೆರಳಿದಾಗ ಮೊದಲೇ ಪಿತೂರಿ ನಡೆಸಿ ತಂದಿರಿಸಿದ್ದ ಮಾರಕಾಯುಧಗಳಾದ ಸೋಡಾ ಬಾಟ್ಲಿಗಳನ್ನು ಆ್ಯಂಬುಲೆನ್ಸ್ ವಾಹನದಿಂದ ತೆಗೆದು ಪೊಲೀಸರ ಮೇಲೆಯೇ ಗುಂಪಲ್ಲಿದ್ದವರು ದಾಳಿ ನಡೆಸಿದ್ದರು. ಈ ಸಂದರ್ಭ ಓರ್ವ ವ್ಯಕ್ತಿಯು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ನನ್ನ ಹೊಟ್ಟೆಗೆ ತಿವಿಯಲು ಬಂದಿದ್ದು, ಅದನ್ನು ನಾನು ತಡೆದಿದ್ದರಿಂದ ನನ್ನ ಅಂಗೈಗೆ ಗಾಯವಾಗಿದೆ. ಅಲ್ಲದೇ, ಡಿವೈಎಸ್ಪಿಯವರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಗುಂಪು ಸೇರಿದ್ದ ಜನರು ಸ್ಥಳದಿಂದ ಒಮ್ಮೆಲೆ ಒಬ್ಬರ ಮೇಲೊಬ್ಬರಂತೆ ಬಿದ್ದು ಓಡುತ್ತಾ ಮಸೀದಿಯ ಕಾಂಪೌಂಡ್ ಗೋಡೆ ಹಾರಲು ಯತ್ನಿಸುತ್ತಾ ಮಸೀದಿಯೊಳಗೆ ಹೋಗಿರುವುದಲ್ಲದೆ, ಪೊಲೀಸರ ಮೇಲೆ ಕಲ್ಲು, ಸೋಡಾ ಬಾಟ್ಲಿಗಳನ್ನು ತೂರಿದ್ದಾರೆ. ಅಲ್ಲದೇ, ಪೊಲೀಸ್ ವಾಹನಕ್ಕೆ, ಇಲಾಖಾ ಸೊತ್ತಿಗೆ ಹಾನಿಗೊಳಿಸಿ, ಸುಮಾರು 25 ಸಾವಿರ ರೂ. ನಷ್ಟವುಂಟು ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಪೊಲೀಸರು ಕಲಂ 143,147,148,332 504, 427 353 307 ಜೊತೆಗೆ 149 ಭಾದಂಸಂ ಮತ್ತು ಕಲಂ 2(ಎ) ಕೆಪಿಡಿಎಲ್ಪಿ ಆಕ್ಟ್ ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







