ಬ್ಯಾಂಕ್‍ಗಳ ಖಾಸಗೀಕರಣದಿಂದ ಸಾರ್ವಜನಿಕ ಆಸ್ತಿ ಲೂಟಿ: ಶ್ರೀನಿವಾಸ್ ಆರೋಪ

ಬೆಂಗಳೂರು, ಡಿ.16: ಕೇಂದ್ರ ಸರಕಾರವು ದೊಡ್ಡ ಸಾಲಗಾರರ ಬಾಕಿ ವಸೂಲಿಗೆ ದಿಟ್ಟ ಪ್ರಯತ್ನ ನಡೆಸುವುದರ ಬದಲಾಗಿ ಬ್ಯಾಂಕ್‍ಗಳನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ಸಾರ್ವಜನಿಕ ಆಸ್ತಿಗಳ ಲೂಟಿಗೆ ಅವಕಾಶ ನೀಡುತ್ತಿದೆ ಎಂದು ಬ್ಯಾಂಕ್ ಸಂಘಟನೆಗಳ ಐಕ್ಯ ವೇದಿಕೆಯ ರಾಜ್ಯ ಸಂಚಾಲಕ ಶ್ರೀನಿವಾಸ್ ಆರೋಪಿಸಿದರು.
ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬ್ಯಾಂಕ್‍ಗಳ ಖಾಸಗೀಕರಣದಿಂದ ದೇಶದ ಜನರು ಉಳಿತಾಯ ಮಾಡಿದ್ದ ಹಣವು ಲೂಟಿ ಆಗಲಿದೆ. 1923 ರಿಂದ 1968ರ ಅವಧಿಯಲ್ಲಿ 2,132 ಬ್ಯಾಂಕ್‍ಗಳು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಲೂ ಖಾಸಗಿ ಬ್ಯಾಂಕ್‍ಗಳು ವಿಫಲವಾಗುತ್ತಿದೆ. ಆದರೆ ಸರಕಾರವು ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಖಾಸಗೀಕರಣಗೊಳಿಸುತ್ತಿದೆ ಎಂದರು.
ಸಾರ್ವಜನಿಕ ವಲಯದ ಬ್ಯಾಂಕ್‍ಗಳ ಖಾಸಗೀಕರಣ, ಜೀವ ವಿಮಾ ನಿಗಮದಲ್ಲಿನ ಬಂಡವಾಳ ಹಿಂತೆಗೆತ, ವಿಮಾ ಕಂಪನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ಶೇ. 74 ವಿದೇಶಿ ಬಂಡವಾಳ ಹೂಡಿಕೆ ಮುಂತಾದ ಕೇಂದ್ರ ಸರಕಾರದ ಕ್ರಮಗಳಿಂದ ಬ್ಯಾಂಕಿಂಗ್ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ. ಬ್ಯಾಂಕಿಂಗ್ ಕ್ಷೇತ್ರದ ಉಳಿವಿಗಾಗಿ ಸರಕಾರವು ಖಾಸಗೀಕರಣ ಮೊರೆ ಹೋಗದಂತೆ ಅವರು ಮನವಿ ಮಾಡಿದರು.







