ಡಿ. 28: ಬೇಡಿಕೆ ಈಡೇರಿಕೆಗಾಗಿ ದಸಂಸದಿಂದ ವಿಧಾನಸೌಧ ಚಲೋ
ಉಡುಪಿ, ಡಿ.16: ವಿವಿಧ ಕಾರಣಗಳಿಗಾಗಿ ಮುಂದೂಡಲ್ಪಟ್ಟ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಆಯೋಜಿಸಲಾಗಿದ್ದ ‘ಸಬಲೀಕರಣಕ್ಕಾಗಿ ಸಂಘರ್ಷ ರ್ಯಾಲಿ: ವಿಧಾನಸೌಧ ಚಲೋ’ ಕಾರ್ಯಕ್ರಮ ಇದೇ ಡಿ.28ರಂದು ಮಂಗಳವಾರ ಬೆಂಗಳೂರಿನ ಚಿಕ್ಕ ಲಾಲ್‌ಬಾಗ್‌ನಿಂದ ಪ್ರಾರಂಭಗೊಳ್ಳಲಿದೆ ಎಂದು ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಮಿತಿಯ ಕರೆಯ ಮೇರೆಗೆ ನಡೆಯುವ ಈ ರ್ಯಾಲಿಯಲ್ಲಿ ರಾಜ್ಯಾದ್ಯಂತ ದಿಂದ ಒಟ್ಟು ಸುಮಾರು 50,000ಕ್ಕೂ ಅಧಿಕ ಭಾಗವಹಿಸುವ ನಿರೀಕ್ಷೆ ಇದೆ. ಉಡುಪಿ ಜಿಲ್ಲೆಯಿಂದ 300 ಮಂದಿ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ದಲಿತರ ಸುಮಾರು 18 ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದಿರಿಸಿ, ಮುಖ್ಯಮಂತ್ರಿಗಳಿಗೆ ಹಕ್ಕೋತ್ತಾಯಗಳ ಜಾರಿಗೆ ಆಗ್ರಹಿಸಿ ಈ ರ್ಯಾಲಿ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ದಲಿತ, ದಮನಿತರ ಮೇಲಿನ ದಾಳಿ, ದೌರ್ಜನ್ಯಗಳು ಹೆಚ್ಚಾಗಿವೆ. ಹತ್ರಾಸ್, ಹುನ್ನಾವೋ, ದೆಹಲಿ ಅತ್ಯಾಚಾರ, ಅಸ್ಪಶ್ಯತೆ ಆಚರಣೆ ಹಾಗೂ ಕೊಲೆಗಳಂತಹ ಘಟನೆಗಳು ಸಮಾಜವನ್ನು ಕಂಗೆಡಿಸಿವೆ. ಆದರೆ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ಇವ್ಯಾವುದಕ್ಕೂ ಪ್ರತಿಕ್ರಿಯೆ, ಖಂಡನೆ ವ್ಯಕ್ತಪಡಿಸಿಲ್ಲ. ಸಿನಿಮಾ ಮಂದಿಯ, ಕ್ರೀಡಾಪಟುಗಳ ಹುಟ್ಟುಹಬ್ಬಕ್ಕೂ ಶುಭಕೋರುವ ಪ್ರಧಾನಿ, ದೇಶದ ಮೂಲನಿವಾಸಿಗಳ ಮೇಲಿನ ದೌರ್ಜನ್ಯ, ಕೊಲೆಗೆ ಸದಾ ವೌನವಾಗಿರುತ್ತಾರೆ ಎಂದವರು ಆರೋಪಿಸಿದರು.
ಮಾನವೀಯ ಮೌಲ್ಯಗಳಿಗೆ ಧ್ವನಿಕೊಡದ, ಅತ್ಯಂತ ಕೆಟ್ಟ ಮನಸ್ಸಿನ ಪ್ರಧಾನ ಮಂತ್ರಿ ಕಳೆದ ಏಳು ವರ್ಷಗಳಿಂದ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಪ್ರಧಾನಿಗಳ ಮೌನ ದುಷ್ಕರ್ಮಿಗಳ ಕೃತ್ಯಕ್ಕೆ ಸಮ್ಮತಿ ಸೂಚಿಸುವಂತಿದೆ. ಪ್ರಸ್ತುತ ದೇಶದಲ್ಲಿ ಸಂಘ ಪರಿವಾರದ ಆಟಾಟೋಪ ಮೇರೆ ಮೀರಿದೆ. ಮೋದಿ ಅವರ ಸಚಿವ ಸಂಪುಟದ ಸಹೋದ್ಯೋಗಿಗಳೇ ಸಂವಿಧಾನದ ವಿರುದ್ಧ ವಿಷಕಾರಿದರೂ ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸುಂದರ ಮಾಸ್ತರ್ ದೂರಿದರು.
ವಿಶ್ವ ಮಾನವ ತತ್ವ ಸಾರಿದ ಕುವೆಂಪು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವೆಂದು ಕರೆದರು. ಆದರೆ ಇಂದು ಈ ನೆಲದಲ್ಲಿ ತ್ರಿಶೂಲ, ಭರ್ಜಿ, ಕತ್ತಿ, ಬಾಕುಗಳೇ ಮಾತನಾಡುತ್ತಿವೆ ಎಂದು ಹೇಳಿದ ಸುಂದರ ಮಾಸ್ತರ್, ಆದ್ದರಿಂದ ದಸಂಸ ದಲಿತ, ದಮನಿತರ ಸಬಲೀಕರಣಕ್ಕಾಗಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದೆ ಎಂದರು.
ಬೇಡಿಕೆ: ಪರಿಶಿಷ್ಟ ಜಾತಿ ವರ್ಗ ದೌರ್ಜನ್ಯ ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು. ಕೇಂದ್ರ ಸರಕಾರ ಕರ್ನಾಟಕ ಮಾದರಿಯಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಬೇಕು. ವಿದ್ಯಾರ್ಥಿ ವೇತನ, ಬಡ್ತಿ ಮೀಸಲಾತಿ, ಬ್ಯಾಕ್ ಲಾಗ್ ನೇಮಕಾತಿ, ಗುತ್ತಿಗೆ ಮತ್ತು ಸಂಗ್ರಹಣೆ ಒಂದು ಕೋಟಿ ಅನುಷ್ಠಾನಗೊಳಿಸಲು, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವಂತೆ ಕೋರಿ ಒಟ್ಟು 18 ಬೇಡಿಕೆಗಳನ್ನೊಳ ಗೊಂಡ ಮನವಿಯನ್ನು ಅಂದು ಸರಕಾರಕ್ಕೆ ಅರ್ಪಿಸಲಾಗುವುದು ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತದಲ್ಲಿ ನಾವು ಬದುಕುವ ಅವಕಾಶವನ್ನೇ ಕಳೆದುಕೊಳ್ಳುತಿದ್ದೇವೆ. ಭಯದ ವಾತಾವರಣದಲ್ಲಿ ಬದುಕುತಿದ್ದೇವೆ. ಇಂದು ರಾಜ್ಯದಲ್ಲಿ ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಒಟ್ಟಾಗಿ ಶೇ.90ರಷ್ಟು ಜನಸಂಖ್ಯೆ ಇದ್ದು, ಇವರು ಒಂದಾಗಿ ದೇಶದ ಚುಕ್ಕಾಣಿ ಹಿಡಿಯುವ ದಿನಗಳು ದೂರವಿಲ್ಲ ಎಂದರು.
ರಾಜ್ಯ ಸರಕಾರ ತರಲುದ್ದೇಶಿಸಿರುವ ಮತಾಂತರ ತಡೆ ಕಾಯ್ದೆಗೆ ನಮ್ಮ ವಿರೋಧವಿದೆ. ದೇಶದಲ್ಲಿ ಒಂದೇ ಒಂದು ಬಲವಂತದ ಮತಾಂತರ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಸಾಬೀತಾಗಿಲ್ಲ. ಕೇವಲ ಓಟ್ ಬ್ಯಾಂಕ್ ರಾಜಕೀಯ ಕ್ಕಾಗಿ ಬಿಜೆಪಿ ಇದನ್ನೊಂದು ಚುನಾವಣಾ ವಿಷಯವಾಗಿಸಲು ಇದನ್ನು ಮುಂಚೂಣಿಗೆ ತರುತ್ತಿದೆ ಎಂದವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ನಾಯಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ರಾಘವ ಕಾರ್ಕಳ, ಗೋಪಾಲಕೃಷ್ಣ ಕುಂದಾಪುರ, ಅಣ್ಣಪ್ಪ ನಕ್ರೆ ಮುಂತಾದವರು ಉಪಸ್ಥಿತರಿದ್ದರು.







