ಕಾಪು ಕಾಲೇಜಿನಲ್ಲಿ ವಿದ್ಯಾರ್ಥಿಗೆ ಹಲ್ಲೆ ಆರೋಪ; ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು
ಕಾಪು : ವಿದ್ಯಾರ್ಥಿನಿಯೊಂದಿಗೆ ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಮಾತನಾಡಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಗಳ ತಂಡವೊಂದು ಆತನಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಕಾಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದೆ.
ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಅರೋಪದಲ್ಲಿ ವಿದ್ಯಾರ್ಥಿಯೋರ್ವನನ್ನು ತರಾಟೆಗೆ ತೆಗೆದುಕೊಂಡ ಇತರ ವಿದ್ಯಾರ್ಥಿಗಳ ತಂಡ ಆತನಿಗೆ ಹಲ್ಲೆ ನಡೆಸಿದ್ದು, ಈ ವೇಳೆ ವಿದ್ಯಾರ್ಥಿ ತನ್ನ ಸಹೋದರನಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಹೋದರ ಬಂದಿರುವುದು ಅಸಮಾಧಾನಕ್ಕೆ ಕಾರಣವಾಯಿತು. ಎರಡೂ ಕಡೆ ಹೊರಗಿನ ಜನ ಜಮಾಯಿಸುತ್ತಿರುವುದನ್ನು ಕಂಡ ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕ ಬಂದ ಪೊಲೀಸರು ವಿದ್ಯಾರ್ಥಿಗಳನ್ನು ಹಾಗೂ ಕಾಲೇಜು ಆವಣರಕ್ಕೆ ಬಂದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡರು.
ಪರಿಸ್ಥಿತಿ ತಿಳಿಗೊಳಿಸಿದ ಎಸ್‍ಐ: ಕಾಪು ಎಸ್‍ಐ ರಾಘವೇಂದ್ರ ಸಿ. ಅವರು ಸೇರಿದ ಜನರಲ್ಲಿ ಮನವಿ ಮಾಡುತ್ತಾ, ವಿದ್ಯಾರ್ಥಿಗಳ ಕಾಲೇಜಿಗೆ ಬಂದಿರುವುದು ಶಿಕ್ಷಣ ಪಡೆಯಲು. ಕ್ಷುಲ್ಲಕ ವಿಚಾರವನ್ನು ವಿಕೋಪಕ್ಕೆ ಹೋಗದಂತೆ ಪ್ರತಿಯೋರ್ವರು ಸಹಕರಿಸಬೇಕು ಎಂದು ಮನವಿ ಮಾಡಿದರು. ಎಸ್‍ಐ ರಾಘವೇಂದ್ರ ಹಾಗೂ ಪೊಲೀಸರ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.







