ಆಮ್ಲಜನಕದ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ: ಉ.ಪ್ರ. ಸರಕಾರ

ಲಕ್ನೋ, ಡಿ. 16: ಕೋವಿಡ್ ಎರಡನೇ ಅಲೆ ಸಂದರ್ಭ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಯಾರೂ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲ ಎಂದು ಉತ್ತರಪ್ರದೇಶ ಸರಕಾರ ಗುರುವಾರ ವಿಧಾನ ಪರಿಷತ್ ಗೆ ತಿಳಿಸಿದೆ. ಆದರೆ, ಈ ಪ್ರತಿಪಾದನೆಯನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಮೃತಪಟ್ಟ 22,915 ರೋಗಿಗಳಲ್ಲಿ ಯಾರೊಬ್ಬರ ಮರಣ ಪ್ರಮಾಣ ಪತ್ರದಲ್ಲೂ ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಉಲ್ಲೇಖಿಸಿಲ್ಲ ಎಂದು ಸರಕಾರ ಹೇಳಿದೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ದೀಪಕ್ ಸಿಂಗ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್, ‘‘ಕೋವಿಡ್ ಎರಡನೇ ಅಲೆ ಸಂದರ್ಭ ಆಮ್ಲಜನಕದ ಕೊರತೆಯಿಂದ ರಾಜ್ಯದಲ್ಲಿ ಯಾರೂ ಸಾವನ್ನಪ್ಪಿದ ಬಗ್ಗೆ ವರದಿಯಾಗಿಲ್ಲ’’ ಎಂದು ಹೇಳಿದರು. ಪೂರಕ ಪ್ರಶ್ನೆಯನ್ನು ಎತ್ತಿದ ದೀಪಕ್, ನಿಮ್ಮದೆ ಸಚಿವರು ಹೇಳಿದ ಇದೇ ರೀತಿಯ ಪ್ರಕರಣಗಳ ಬಗ್ಗೆ ಸರಕಾರದಲ್ಲಿ ವಿವರಗಳು ಇವೆಯೇ ಎಂದರು.
‘‘ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಹಲವು ಸಚಿವರು ಪತ್ರ ಬರೆದಿದ್ದಾರೆ. ಇದಲ್ಲದೆ, ಹಲವು ಸಂಸದರು ಕೂಡ ಇಂತಹ ದೂರು ನೀಡಿದ್ದಾರೆ. ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಇಡೀ ರಾಜ್ಯದಲ್ಲಿ ಸಂಭವಿಸಿದ ಈ ಸಾವಿನ ಬಗ್ಗೆ ಸರಕಾರದಲ್ಲಿ ಮಾಹಿತಿ ಇದೆಯೇ ? ಗಂಗಾ ನದಿಯಲ್ಲಿ ಮೃತದೇಹಗಳು ತೇಲುತ್ತಿದ್ದುದು ಹಾಗೂ ಆಮ್ಲಜನಕದ ಕೊರತೆಯಿಂದ ಜನರು ತೊಂದರೆಗೊಳಗಾಗಿರುವುದನ್ನು ಸರಕಾರ ನೋಡಲಿಲ್ಲವೇ? ಸ್ಪಷ್ಟನೆ ನೀಡಿ’’ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್, ಆಸ್ಪತ್ರೆಯಲ್ಲಿ ದಾಖಲಾಗಿ ಮೃತಪಟ್ಟ ರೋಗಿಗಳ ಮರಣ ಪ್ರಮಾಣ ಪತ್ರವನ್ನು ವೈದ್ಯರು ನೀಡಿದ್ದಾರೆ. ರಾಜ್ಯದಲ್ಲಿ ಕೋವಿಡ್ನಲ್ಲಿ ಮೃತಪಟ್ಟ 22,915 ಮಂದಿಗೆ ವೈದ್ಯರು ನೀಡಿದ ಮರಣ ಪ್ರಮಾಣ ಪತ್ರದಲ್ಲಿ ಎಲ್ಲಿ ಕೂಡ ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಉಲ್ಲೇಖಿಸಿಲ್ಲ ಎಂದರು. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಇತರ ಹಲವು ರೋಗಗಳ ಕಾರಣದಿಂದ ಹಲವರು ಸಾವನ್ನಪ್ಪಿದ್ದಾರೆ. ಆಮ್ಲಜನಕದ ಕೊರತೆ ಉಂಟಾದಾಗ ಇತರ ರಾಜ್ಯಗಳಿಂದ ಆಮ್ಲಜನಕ ಪಡೆದುಕೊಂಡು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರತಾಪ್ ಹೇಳಿದರು.