ಗುಜರಾತ್: ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು, 15 ಮಂದಿಗೆ ಗಾಯ
ಪಂಚಮಹಲ್, ಡಿ. 16: ಗುಜರಾತ್ ನ ಪಂಚಮಹಲ್ ಜಿಲ್ಲೆಯ ಗುಜರಾತ್ ಫ್ಲೋರೋ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಿಂದ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ಸದ್ದು ಹಲವು ಕಿ.ಮೀ. ದೂರಕ್ಕೆ ಕೇಳಿಸಿದೆ. ಕಾರ್ಖಾನೆಯಲ್ಲಿ ರಕ್ಷಣೆ ಹಾಗೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದೆ.
ಈಗ ಬೆಂಕಿ ನಿಯಂತ್ರಣದಲ್ಲಿದೆ ಎಂದು ಪಂಚಮಹಲ್ನ ಪೊಲೀಸ್ ಅಧೀಕ್ಷಕಿ ಲೀನಾ ಪಾಟೀಲ್ ಅವರು ಹೇಳಿದ್ದಾರೆ. ಘೋಘಂಬ ತಾಲೂಕಿನ ರಂಜಿತ್ನಗರ ಗ್ರಾಮದ ಸಮೀಪ ಇರುವ ಗುಜರಾತ್ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ (ಜಿಎಫ್ಎಲ್) ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಬೆಳಗ್ಗೆ ಸುಮಾರು 10 ಗಂಟೆಗೆ ಸ್ಫೋಟ ಸಂಭವಿಸಿದೆ ಎಂದು ಪಾಟೀಲ್ ತಿಳಿಸಿದ್ದಾರೆ.
‘‘ಸ್ಫೋಟ ಹಾಗೂ ಅನಂತರ ಹತ್ತಿಕೊಂಡ ಬೆಂಕಿಯಿಂದ ಸುಮಾರು 15 ಮಂದಿ ಕೆಲಸಗಾರರು ಗಾಯಗೊಂಡಿದ್ದಾರೆ. ಅವರನ್ನು ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಕೆಲವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ’’ ಎಂದು ಅವರು ತಿಳಿಸಿದ್ದಾರೆ. ಸ್ಥಳದಲ್ಲಿ ಸಂತ್ರಸ್ತರು ಹಾಗೂ ಗಾಯಗೊಂಡ ವ್ಯಕ್ತಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಬೆಂಕಿ ಈಗ ನಿಯಂತ್ರಣದಲ್ಲಿದೆ ಎಂದು ಪಾಟೀಲ್ ತಿಳಿಸಿದ್ದಾರೆ.