ನಗರಸಭೆ ಟಿಕೆಟ್ ಹಂಚಿಕೆಯಲ್ಲಿ ಅಸ್ಪೃಶ್ಯ ದಲಿತ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ: ಹೊನ್ನೇಶ್ ಆರೋಪ
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

ಚಿಕ್ಕಮಗಳೂರು, ಡಿ.16: ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಸ್ಪೃಶ್ಯ ದಲಿತ ಸಮುದಾಯಗಳ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಲ್ಲಿ ತಾರತಮ್ಯ ಮಾಡಿದ್ದು, ಇದರಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಹೊನ್ನೇಶ್ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯ 35 ವಾರ್ಡ್‍ಗಳಲ್ಲಿ 6ಮೀಸಲು ಕ್ಷೇತ್ರಗಳಿವೆ. ಅದರಲ್ಲಿ ಅಸ್ಪೃಶ್ಯ ದಲಿತ ಸಮುದಾಯದ ಕಾಂಗ್ರೆಸ್ ಮುಖಂಡರಿಗೆ ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ಮುಖಂಡರು ತಾರತಮ್ಯ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಅನ್ಯಾಯ ಮಾಡಿದ್ದು, ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡಿದ್ದಾರೆ. ತಾನು ಪಕ್ಷದಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ದುಡಿದು ಸದ್ಯ ಪರಿಶಿಷ್ಟ ಘಟಕದ ಅಧ್ಯಕ್ಷನಾಗಿ ಕಳೆದ 14ವರ್ಷಗಳಿಂದ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ, ಆದರೆ ಮುಖಂಡರು ನನ್ನ ಸೇವೆಯನ್ನು ನಿರ್ಲಕ್ಷಿಸಿ ಹೊರಗಿನಿಂದ ಬಂದವರಿಗೆ ಮನ್ನಣೆ ನೀಡಿದ್ದಾರೆ. ಇದರಿಂದ ನೊಂದು ಪಕ್ಷ ತೊರೆದಿದ್ದೇನೆ ಎಂದರು.
ನಗರದ 18ನೇ ವಾರ್ಡ್ ಶಾಂತಿನಗರ ಬಡಾವಣೆಯಿಂದ ಚುನಾವಣೆಗೆ ಸ್ಫಂದಿಸಲು ತಾನು ಇಚ್ಚಿಸಿದ್ದೆ. ಆದರೆ ನನಗೆ ಟಿಕೆಟ್ ನೀಡದೇ ಬೆಂಗಳೂರು ಮೂಲದ ಕುಮಾರ್ ಎಂಬವರ ಪತ್ನಿ ಆಶಾಲತಾ ಅವರಿಗೆ ಟಿಕೆಟ್ ನೀಡಲಾಗಿದೆ. ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಟಿಕೆಟ್ ಕೊಡಿಸುವ ಭರವಸೆ ನೀಡಿ ಈಗ ವಂಚಿಸಿದ್ದಾರೆ. ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ, ಬಿ.ಎಲ್.ಶಂಕರ್ ಅವರನ್ನು ಸಂಪರ್ಕಿಸಿದಾಗ ಕೆ.ಜೆ.ಜಾರ್ಜ್ ಅವರ ಒತ್ತಡಕ್ಕೆ ಮಣಿದು ಕುಮಾರ್ ಅವರ ಪತ್ನಿ ಆಶಾಲತಾ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬುದು ತಿಳಿದು ಬಂದಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿಸಂಸದ ಧ್ರುವನಾರಾಯಣ ಅವರು ನನಗೆ ಟಿಕೆಟ್ ನೀಡಬೇಕು ಎಂದು ಶಿಫಾರಸು ಮಾಡಿದ್ದರು. ಆದರೆ ಪಕ್ಷದ ಜಿಲ್ಲಾ ಮುಖಂಡರು ಅವರ ಮಾತಿಗೆ ಕಿಂಚಿತ್ ಬೆಲೆ ನೀಡದೇ ಶೋಷಿತ ಸಮುದಾಯಗಳ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚೆಗೆ ದಲಿತ ಸಮುದಾಯದವರಿಗೆ ನ್ಯಾಯ ಸಿಗುತ್ತಿಲ್ಲ. ಬಿಜೆಪಿಯಂತೆ ಕಾಂಗ್ರೆಸ್ ಕೂಡ ಮನುವಾದಿಗಳ ಪಕ್ಷವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಗಣೇಶ್, ಮನೋಜ್ ಉಪಸ್ಥಿತರಿದ್ದರು.







