ಭೋಪಾಲ್ ನಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಗೆ ಅಂತಿಮ ನಮನ

ಹೊಸದಿಲ್ಲಿ: ಡಿಸೆಂಬರ್ 8 ರಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಇತರ 12 ಮಂದಿಯನ್ನು ಬಲಿ ತೆಗೆದುಕೊಂಡ ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಇಂದು ಅವರ ಹುಟ್ಟೂರಾದ ಭೋಪಾಲ್‌ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.
ಶೌರ್ಯ ಚಕ್ರ ಪಡೆದ ಗ್ರೂಪ್ ಕ್ಯಾಪ್ಟನ್ ಸಿಂಗ್ ಮಾತ್ರ ಹೆಲಿಕಾಪ್ಟರ್ ಪತನದ ವೇಳೆ ರಕ್ಷಿಸಲ್ಪಟ ಏಕೈಕ ವ್ಯಕ್ತಿಯಾಗಿದ್ದು, ಜನರಲ್ ರಾವತ್ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ತೀವ್ರ ಗಾಯಗೊಂಡಿದ್ದ ಸಿಂಗ್ ಅವರು ಬುಧವಾರ ಮೃತಪಟ್ಟಿದ್ದಾರೆ.
ಭೋಪಾಲ್‌ನ ಬೈರಾಗರ್ ಸ್ಮಶಾನದಲ್ಲಿ ವಾಯುಪಡೆಯ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದವರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದ್ದಾರೆ.
ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಧಿಕಾರಿಯನ್ನು ತಮಿಳುನಾಡಿನ ಕುನ್ನೂರಿನ ವೆಲ್ಲಿಂಗ್ಟನ್‌ನಿಂದ ಸ್ಥಳಾಂತರಿಸಿದ ನಂತರ ಬುಧವಾರ ನಿಧನರಾದರು. ಅಧಿಕಾರಿಗಳ ಪ್ರಕಾರ ಅವರು ಜೀವರಕ್ಷಕ ವ್ಯವಸ್ಥೆಯಲ್ಲಿದ್ದರು. ಗುರುವಾರ ಮಧ್ಯಾಹ್ನ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಭೋಪಾಲ್‌ಗೆ ತರಲಾಯಿತು.
ಮುಖ್ಯಮಂತ್ರಿ ಚೌಹಾಣ್ ಅವರು ತಮ್ಮ ಸರಕಾರವು ಅಧಿಕಾರಿಯ ಕುಟುಂಬಕ್ಕೆ ರೂ. 1 ಕೋಟಿಯ 'ಸಮ್ಮಾನ್ ನಿಧಿ' ನೀಡುವುದಾಗಿ ಹೇಳಿದ್ದಾರೆ.