ಟ್ವೆಂಟಿ-20 ಕ್ರಿಕೆಟ್: ಕೆ.ಎಲ್. ರಾಹುಲ್-ರೋಹಿತ್ ಶರ್ಮಾ ದಾಖಲೆ ಮುರಿದ ಬಾಬರ್ -ರಿಝ್ವಾನ್

Photo: AP
ಕರಾಚಿ: ನಾಯಕ ಬಾಬರ್ ಆಝಮ್ ಹಾಗೂ ವಿಕೆಟ್ಕೀಪರ್-ಬ್ಯಾಟರ್ ಮುಹಮ್ಮದ್ ರಿಝ್ವಾನ್ ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಟ್ವೆಂಟಿ-20 ಮಾದರಿ ಕ್ರಿಕೆಟ್ ನಲ್ಲಿ ಯಶಸ್ಸಿ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದಾರೆ. ಬಾಬರ್-ರಿಝ್ವಾನ್ ಜೋಡಿ ಗುರುವಾರ ಭಾರತದ ಆರಂಭಿಕರಾದ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ. ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಬೃಹತ್ ದಾಖಲೆ ನಿರ್ಮಿಸಿದ್ದಾರೆ.
ಇವರಿಬ್ಬರು ಟ್ವೆಂಟಿ-20 ಕ್ರಿಕೆಟ್ ನಲ್ಲಿ ಆರನೇ ಬಾರಿ 100ಕ್ಕೂ ಅಧಿಕ ರನ್ ಜೊತೆಯಾಟ ದಾಖಲಿಸಿದರು. ಟ್ವೆಂಟಿ-20 ಪಂದ್ಯದಲ್ಲಿ ಐದು ಬಾರಿ 100 ಹಾಗೂ ಅದಕ್ಕಿಂತ ಹೆಚ್ಚು ರನ್ ಜೊತೆಯಾಟ ನಡೆಸಿರುವ ರಾಹುಲ್ ಹಾಗೂ ರೋಹಿತ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಬಾಬರ್ ಹಾಗೂ ರಿಝ್ವಾನ್ ಈ ಸಾಧನೆ ಮಾಡಿದರು.
ಬಾಬರ್ (53 ಎಸೆತಗಳಲ್ಲಿ 79 ರನ್) ಹಾಗೂ ರಿಝ್ವಾನ್ (45 ಎಸೆತಗಳಲ್ಲಿ 87 ರನ್) ಆರಂಭಿಕ ವಿಕೆಟ್ಗೆ 158 ರನ್ ಸೇರಿಸಿದರು ಹಾಗೂ ಪಾಕಿಸ್ತಾನದ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು.
ಬಾಬರ್-ರಿಝ್ವಾನ್ ಅವರ 158 ರನ್ಗಳ ಜೊತೆಯಾಟವು ಆರಂಭಿಕ ಜೋಡಿಯಾಗಿ ಅವರ ನಾಲ್ಕನೇ 150-ಪ್ಲಸ್ ಜೊತೆಯಾಟವಾಗಿದೆ. ಇವೆಲ್ಲವೂ 2021 ರಲ್ಲಿ ಟ್ವೆಂಟಿ-20 ಕ್ರಿಕೆಟ್ ನಲ್ಲಿ ದಾಖಲಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಸೆಂಚುರಿಯನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 197 ರನ್ಗಳ ಜೊತೆಯಾಟದ ನಂತರ ಇದು ಅವರ ಎರಡನೇ ಅತ್ಯುತ್ತಮ ಜೊತೆಯಾಟವಾಗಿದೆ.
208 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಮೊದಲ ವಿಕೆಟ್ ನಲ್ಲಿ ದಾಖಲಾದ ಭರ್ಜರಿ ಜೊತೆಯಾಟದ ನೆರವಿನಿಂದ 7 ವಿಕೆಟ್ಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಅವರ 37 ಎಸೆತಗಳಲ್ಲಿ 64 ರನ್ ಹಾಗೂ ಕ್ರಮವಾಗಿ ಬ್ರಾಂಡನ್ ಕಿಂಗ್ (43), ಶಮರ್ ಬ್ರೂಕ್ಸ್ (49) ಮತ್ತು ಡ್ಯಾರೆನ್ ಬ್ರಾವೋ (34) ಅವರ ಪ್ರಮುಖ ಕೊಡುಗೆಗಳ ನೆರವಿನಿಂದ ವಿಂಡೀಸ್ 3 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು.
ಈ ಗೆಲುವಿನೊಂದಿಗೆ ಪಾಕಿಸ್ತಾನ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ವಿಂಡೀಸ್ ಅನ್ನು ಕ್ಲೀನ್-ಸ್ವೀಪ್ ಮಾಡಿದೆ.