ಬೀದಿ ನಾಯಿಗಳಿಗೆ ಆಹಾರ ನೀಡಿದ ಮುಂಬೈ ಮಹಿಳೆಗೆ 8 ಲಕ್ಷ ರೂ.ದಂಡ: ಆರೋಪ

ಥಾಣೆ, ಡಿ. 17: ವಸತಿ ಸಂಕೀರ್ಣದ ಒಳಗೆ ಬೀದಿ ನಾಯಿಗಳಿಗೆ ಆಹಾರ ನೀಡಿರುವುದಕ್ಕೆ ರೆಸಿಡೆನ್ಸಿಯಲ್ ಸೊಸೈಟಿ ತನಗೆ 8 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ನವಿ ಮುಂಬೈಯ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿರುವ ಮಹಿಳೆಯೋರ್ವರು ಆರೋಪಿಸಿದ್ದಾರೆ.
40 ಕಟ್ಟಡಗಳನ್ನು ಒಳಗೊಂಡಿರುವ ಎನ್‌ಆರ್‌ಐ ಸಂಕೀರ್ಣದ ಆಡಳಿತ ಸಮಿತಿ ಈ ದಂಡ ವಿಧಿಸಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಅಂಶು ಸಿಂಗ್, ಕಟ್ಟಡ ಸಂಕೀರ್ಣದ ಒಳಗೆ ಬೀದಿ ನಾಯಿಗಳಿಗೆ ಆಹಾರ ನೀಡಿರುವುದಕ್ಕೆ ಹೌಸಿಂಗ್ ಸೊಸೈಟಿ ಪ್ರತಿ ದಿನ 5,000 ರೂಪಾಯಿ ದಂಡ ವಿಧಿಸಿದೆ ಎಂದರು.
ಇದನ್ನು ಕಸ ಹಾಕುವುದಕ್ಕೆ ದಂಡವಾಗಿ ವಿಧಿಸಲಾಗಿದೆ. ನನ್ನ ದಂಡದ ಒಟ್ಟು ಮೊತ್ತ ಈಗ 8 ಲಕ್ಷ ರೂಪಾಯಿಗೆ ತಲುಪಿದೆ. ವಸತಿ ಸಂಕೀರ್ಣದ ಆವರಣದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದು ಪತ್ತೆಯಾದರೆ, ದಂಡ ವಿಧಿಸಲು ಸೊಸೈಟಿಯ ಆಡಳಿತ ಸಮಿತಿ ನಿರ್ಧರಿಸಿದೆ. ಈ ನಿಯಮ 2021 ಜುಲೈಯಲ್ಲಿ ಆರಂಭವಾಯಿತು ಎಂದು ಅವರು ತಿಳಿಸಿದ್ದಾರೆ.
ವಸತಿ ಸಂಕೀರ್ಣದ ಇನ್ನೋರ್ವ ನಿವಾಸಿಗೆ ಒಟ್ಟು 8 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನಾಯಿಗಳಿಗೆ ಆಹಾರ ನೀಡುವ ವಸತಿ ಸಂಕೀರ್ಣದ ಸದಸ್ಯರನ್ನು ಹೌಸಿಂಗ್ ಸೊಸೈಟಿಯ ವಾಚ್ಮೆನ್ ಗುರುತಿಸುತ್ತಾನೆ ಹಾಗೂ ಅವರ ಹೆಸರನ್ನು ಪಟ್ಟಿ ಮಾಡುತ್ತಾನೆ. ಅನಂತರ ಆತ ಅದನ್ನು ಆಡಳಿತ ಸಮಿತಿಗೆ ನೀಡುತ್ತಾನೆ. ಅವರು ಲೆಕ್ಕ ಹಾಕಿ ದಂಡ ವಿಧಿಸುತ್ತಾರೆ ಎಂದು ಇನ್ನೋರ್ವ ನಿವಾಸಿ ಲೀಲಾ ವರ್ಮಾ ಹೇಳಿದ್ದಾರೆ.