ಪ್ರತಿ ಗ್ರಾಮ ಪಂಚಾಯತ್ ಗೊಂದು ಪಿಡಿಒ ವಸತಿ ಗೃಹ: ಸಚಿವ ಕೆ.ಎಸ್.ಈಶ್ವರಪ್ಪ

ಬೆಳಗಾವಿ, ಡಿ.17: ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗಳಲ್ಲಿಯೇ ಪಿಡಿಒ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶುಕ್ರವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಡಾ.ತಳವಾರ್ ಸಾಬಣ್ಣ ವಿಷಯ ಪ್ರಸ್ತಾಪಿಸಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೈಗೆ ಸೀಗುವುದಿಲ್ಲ. ಇದಕ್ಕೆ ಪರಿಹಾರ ಒಸಗಿಸಬೇಕು ಎಂದು ಹೇಳಿದರು.
ಇದಕ್ಕೆ ಧ್ವನಿಗೂಡಿಸಿ, ಸಲಹೆ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ, ಇಂತಹ ಸಮಸ್ಯೆಗೆ ಪ್ರತಿ ಗ್ರಾಮ ಪಂಚಾಯತಿಯಲ್ಲಿಯೇ ಪಿಡಿಒಗಳಿಗೆ ವಸತಿ ಗೃಹ ಕಟ್ಟಿಸಿಕೊಡಿ. ಇದರಿಂದ ಅವರು ಜನರ ಕೈಗೆ ದೊರೆಯುತ್ತಾರೆ ಎಂದರು.
ಸಭಾಪತಿ ಸಲಹೆಯನ್ನು ಸ್ವಾಗತಿಸಿದ ಈಶ್ವರಪ್ಪ, ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ, ನಮ್ಮ ಇಲಾಖೆಯಿಂದಲೇ ಕಟ್ಟಡ ನಿರ್ಮಾಣ ಮಾಡಬಹುದೇ ಎಂದು ನೋಡುತ್ತೇನೆ. ಇಲ್ಲದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರೊಂದಿಗೆ ಚರ್ಚೆ ನಡೆಸಿ, ಆರ್ಥಿಕ ಇಲಾಖೆ ಸಹಯೋಗದೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ನುಡಿದರು.





