ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಭಾರತಕ್ಕೆ ಪದಕ ಖಚಿತಪಡಿಸಿದ ಶ್ರೀಕಾಂತ್,ಲಕ್ಷ್ಯ ಸೇನ್
ಶನಿವಾರ ಸೆಮಿ ಫೈನಲ್ನಲ್ಲಿ ಹಣಾಹಣಿ

ಶ್ರೀಕಾಂತ್ ಹಾಗೂ ಲಕ್ಷ್ಯಸೇನ್ Photo: Indian express
ಮ್ಯಾಡ್ರಿಡ್, ಡಿ.17: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಹಿರಿಯ ಆಟಗಾರ ಕಿಡಂಬಿ ಶ್ರೀಕಾಂತ್ ಹಾಗೂ ಕಿರಿಯ ಆಟಗಾರ ಲಕ್ಷ್ಯಸೇನ್ ಮೊದಲ ಬಾರಿ ಸೆಮಿ ಫೈನಲ್ಗೆ ಪ್ರವೇಶಿಸುವ ಮೂಲಕ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ದೇಶಕ್ಕೆ ಕನಿಷ್ಠ ಎರಡು ಪದಕಗಳನ್ನು ದೃಢಪಡಿಸಿದರು.ಶುಕ್ರವಾರ ಭಾರತದ ಬ್ಯಾಡ್ಮಿಂಟನ್ ಪಾಲಿಗೆ ಐತಿಹಾಸಿಕ ದಿನವಾಗಿ ಪರಿಣಮಿಸಿತು.
ಶ್ರೀಕಾಂತ್ ಹಾಗೂ ಸೇನ್ ಶನಿವಾರ ನಡೆಯಲಿರುವ ಸೆಮಿ ಫೈನಲ್ನಲ್ಲಿ ಪರಸ್ಪರ ಸೆಣಸಾಡಲಿರುವ ಹಿನ್ನೆಲೆಯಲ್ಲಿ ಭಾರತವು ಕನಿಷ್ಠ ಪಕ್ಷ ಬೆಳ್ಳಿ ಪದಕ ಗೆಲುವುದು ಖಚಿತವಾಗಿದೆ.
ಶುಕ್ರವಾರ ಕೇವಲ 26 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ ಡಚ್ ಆಟಗಾರ ಮಾರ್ಕ್ ಕಾಲ್ಜೋವ್ ವಿರುದ್ಧ 21-8, 21-7 ಗೇಮ್ಗಳ ಅಂತರದಿಂದ ಸುಲಭವಾಗಿ ಜಯ ಸಾಧಿಸಿದರು. ಈ ಗೆಲುವಿನೊಂದಿಗೆ ಶ್ರೀಕಾಂತ್ ಅವರು ಈ ವರ್ಷದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದರು. ಶ್ರೀಕಾಂತ್ ವೈಯಕ್ತಿಕವಾಗಿ ಮೊದಲ ಬಾರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪದಕ ತನ್ನದಾಗಿಸಿಕೊಳ್ಳಲಿದ್ದಾರೆ.
ಒಂದು ಗಂಟೆ ಹಾಗೂ 11 ನಿಮಿಷಗಳ ಕಾಲ ನಡೆದ ಮತ್ತೊಂದು ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಶ್ರೇಯಾಂಕರಹಿತ ಸೇನ್ ಚೀನಾದ ಎದುರಾಳಿ ಜುನ್ ಪೆಂಗ್ ಝಾವೊರನ್ನು 21-15, 15-21 ಹಾಗೂ 22-20 ಗೇಮ್ಗಳ ಅಂತರದಿಂದ ಮಣಿಸಿದರು.
ಪದಕವನ್ನು ಖಚಿತಪಡಿಸಿರುವ ಶ್ರೀಕಾಂತ್ ಹಾಗೂ ಸೇನ್ ಬ್ಯಾಡ್ಮಿಂಟನ್ ದಂತಕತೆಯಾಗಿರುವ ಪ್ರಕಾಶ್ ಪಡುಕೋಣೆ(1983ರಲ್ಲಿ ಬೆಳ್ಳಿ)ಹಾಗೂ ಬಿ.ಸಾಯಿ ಪ್ರಣೀತ್(2019ರಲ್ಲಿ ಕಂಚು) ಅವರನ್ನೊಳಗೊಂಡ ಭಾರತೀಯ ಪದಕ ವಿಜೇತರ ಪಟ್ಟಿಗೆ ಸೇರಲಿದ್ದಾರೆ. 2011ರಲ್ಲಿ ಮಹಿಳಾ ಡಬಲ್ಸ್ ಆಟಗಾರ್ತಿಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಕೂಡ ಕಂಚು ಜಯಿಸಿದ್ದರು.







