‘ನಾನು ಮುಸ್ಲಿಮ್ ಎಂದು ನನ್ನನ್ನು ಗುರಿಯಾಗಿಸಿಕೊಳ್ಳಲಾಗಿತ್ತು’: ಎರಡು ತಿಂಗಳ ಜೈಲುವಾಸದಿಂದ ಮುಕ್ತಗೊಂಡ ಅಸ್ಸಾಂ ಮಹಿಳೆ

ಸಾಂದರ್ಭಿಕ ಚಿತ್ರ
ಗುವಾಹಟಿ,ಡಿ.17: ನ್ಯಾಯಮಂಡಳಿಯ ವಿವಾದಾತ್ಮಕ ನಿರ್ಧಾರವನ್ನು ಗುವಾಹಟಿ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದ ಬಳಿಕ ವಿದೇಶಿಯಳು ಎಂಬ ಕಾರಣಕ್ಕೆ ಎರಡು ತಿಂಗಳುಗಳಿಂದ ತೇಜಪುರ ಜೈಲಿನಲ್ಲಿ ಕೊಳೆಯುತ್ತಿದ್ದ ಮಹಿಳೆ ಕೊನೆಗೂ ಬಂಧಮುಕ್ತಗೊಂಡಿದ್ದಾರೆ.
ದರಾಂಗ್ ಜಿಲ್ಲೆಯ ವಿದೇಶಿಯರ ನ್ಯಾಯಮಂಡಳಿಯು ಹಸೀನಾ ಬಾನು (55) ಭಾರತೀಯ ಪ್ರಜೆಯಾಗಿದ್ದಾರೆ ಎಂದು ಆಗಸ್ಟ್ 2016ರಲ್ಲಿ ಹೇಳಿತ್ತು. 2020ರಲ್ಲಿ ಇದೇ ನ್ಯಾಯಮಂಡಳಿಯು ಬಾನು ವಿದೇಶಿ ಪ್ರಜೆಯಾಗಿದ್ದಾರೆ ಎಂದು ಘೋಷಿಸಿತ್ತು. ಪ್ರಕರಣದಲ್ಲಿ ತಿಪ್ಪರಲಾಗದ ನಿರ್ಧಾರವನ್ನು ತಳೆದಿದ್ದಕ್ಕಾಗಿ ಕೆರಳಿದ್ದ ಗುವಾಹಟಿ ಉಚ್ಚ ನ್ಯಾಯಾಲಯವು ಕಳೆದ ವಾರ ನ್ಯಾಯಮಂಡಳಿಯನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು.
ಗುರುವಾರ ರಾತ್ರಿ ದರಾಂಗ್ ಜಿಲ್ಲೆಯ ಶ್ಯಾಮಪುರ ಗ್ರಾಮದಲ್ಲಿಯ ತನ್ನ ಮನೆಯನ್ನು ತಲುಪಿದ ಬಾನು,ತಾನು ಮುಸ್ಲಿಮಳಾಗಿದ್ದಕ್ಕೆ ತನ್ನನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ತನ್ನನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
‘ಜೈಲಿನೊಳಗೆ,ಬಂಧನ ಕೇಂದ್ರದೊಳಗೆ ವಿಪರೀತ ಕಿರುಕುಳ ನೀಡಲಾಗುತ್ತಿದೆ. ಅಲ್ಲಿ ಹಲವಾರು ಹಿಂದುಗಳು ಮತ್ತು ಮುಸ್ಲಿಮರೂ ಇದ್ದಾರೆ. ನಾನು ಮುಸ್ಲಿಮ್ ಆಗಿದ್ದಕ್ಕೆ ನನ್ನನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ನಾನು ಭಾವಿಸಿದ್ದೇನೆ ’ ಎಂದು ಅವರು ಹೇಳಿದರು. ‘ಎರಡನೇ ನ್ಯಾಯಮಂಡಳಿ ಪ್ರಕರಣದ ವಿಚಾರಣೆ ವೇಳೆ ನನ್ನನ್ನು ಭಾರತೀಯ ಪ್ರಜೆಯೆಂದು ಘೋಷಿಸಿದ್ದ ಆದೇಶವನ್ನು ಸಲ್ಲಿಸಿದ್ದೆ,ಆದರೆ ನ್ಯಾಯಮಂಡಳಿಯು ಬೇರೆಯೇ ಆದೇಶವನ್ನು ಹೊರಡಿಸಿತ್ತು. ಈಗ ನಾನು ಭಾರತೀಯ ಪ್ರಜೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ನನಗೆ ಈ ರೀತಿಯಾಗಿ ಏತಕ್ಕೆ ಕಿರುಕುಳ ನೀಡಲಾಗಿತ್ತು ಎನ್ನುವುದು ಸರಕಾರಕ್ಕೆ ನನ್ನ ಪ್ರಶ್ನೆಯಾಗಿದೆ ’ಎಂದರು.
‘ನನ್ನ ಪತ್ನಿಯ ಪೌರತ್ವವನ್ನು ಸಾಬೀತು ಮಾಡುವ ಹೋರಾಟದಲ್ಲಿ ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೆ,ಜೊತೆಗೆ ಅದು ಭಾರೀ ವೆಚ್ಚದಾಯಕವೂ ಆಗಿತ್ತು. ಕಾನೂನು ವೆಚ್ಚಕ್ಕಾಗಿ ನಾನು ಭೂಮಿಯನ್ನೂ ಮಾರಾಟ ಮಾಡಿದ್ದೆ. ಈಗ ನನ್ನ ಪತ್ನಿಯನ್ನು ಭಾರತೀಯ ಪ್ರಜೆ ಎಂದು ಘೋಷಿಸಲಾಗಿದೆ. ಸರಕಾರವು ನಮಗೆ ಪರಿಹಾರ ನೀಡಬೇಕು ಎಂದು ನಾನು ಕೋರುತ್ತೇನೆ ’ ಎಂದು ಬಾನು ಪತಿ ಆಯೆನ್ ಅಲಿ ಹೇಳಿದರು. ನ್ಯಾಯಮಂಡಳಿಯ ದೋಷಯುಕ್ತ ಆದೇಶಗಳಿಗಾಗಿ ಉಚ್ಚ ನ್ಯಾಯಾಲಯವು ಕಟುವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು.
ಸರ್ವೋಚ್ಚ ನ್ಯಾಯಾಲಯದಲ್ಲಿಯ ಪೂರ್ವನಿದರ್ಶನವೊಂದನ್ನು ಉಲ್ಲೇಖಿಸಿದ್ದ ನ್ಯಾ.ಎನ್.ಕೋಟೀಶ್ವರ ಸಿಂಗ್ ಅವರು,ನ್ಯಾಯಮಂಡಳಿಯು ವಿಷಯವನ್ನು ಹೇಗೆ ಪರಿಶೀಲಿಸಿತ್ತು ಎನ್ನುವುದೇ ನಮಗೆ ಅರ್ಥವಾಗುತ್ತಿಲ್ಲ. ಎರಡನೇ ವಿಚಾರಣೆಯಲ್ಲಿ ಬಾನು ವಿದೇಶಿಯರು ಎಂದು ಘೋಷಿಸಿದ್ದು ಸಂವಿಧಾನದ ವಿಧಿ 141ನ್ನು ಉಲ್ಲಂಘಿಸಿರುವುದರಿಂದ ಅದು ಕಾನೂನುಬಾಹಿರವಾಗಿದೆ ಎಂದು ಹೇಳಿದ್ದರು.
ಸರ್ವೋಚ್ಚ ನ್ಯಾಯಾಲಯವು ಘೋಷಿಸುವ ಕಾನೂನುಗಳು ದೇಶದಲ್ಲಿನ ಎಲ್ಲ ನ್ಯಾಯಾಲಯಗಳಿಗೆ ಬಂಧನಕಾರಿಯಾಗಿರುತ್ತವೆ ಎಂದು ವಿಧಿ 141 ಹೇಳುತ್ತದೆ.
ಅರ್ಜಿದಾರರು ಮೊದಲು ಭಾರತೀಯ ಪ್ರಜೆ ಎಂದು ಘೋಷಿಸಲ್ಪಟ್ಟಿದ್ದ ಅದೇ ವ್ಯಕ್ತಿಯಾಗಿದ್ದಾರೆ ಎನ್ನುವುದು ನ್ಯಾಯಮಂಡಳಿಗೆ ಗೊತ್ತಿತ್ತು. ಅರ್ಜಿದಾರರು ಭಾರತೀಯರಾಗಿದ್ದರೂ ಬಂಧನದಲ್ಲಿ ಇರುವಂತಾಗಿತ್ತು ಎಂದು ಬಾನು ಅವರ ವಕೀಲ ಝಾಕಿರ್ ಹುಸೇನ್ ಅವರು ಸುದ್ದಿಗಾರರಿಗೆ ತಿಳಿಸಿದರು.