ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಸಮಿತಿ ರಚನೆ: ಸಚಿವ ಅಶ್ವತ್ಥ ನಾರಾಯಣ

ಬೆಳಗಾವಿ, ಡಿ.17: ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವರದಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.15ರಂದು ಸಮಿತಿಯನ್ನು ರಚಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಶುಕ್ರವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಸದಸ್ಯ ಲಿಂಗೇಶ್ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿದರು.
ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್, ಕಾನೂನು ಇಲಾಖೆ ಕಾರ್ಯದರ್ಶಿ ವೆಂಕಟೇಶ್ ನಾಯಕ್, ಕಾಲೇಜು ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರದೀಪ್ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಒಂದು ತಿಂಗಳಲ್ಲಿ ವರದಿ ಬರುತ್ತದೆ. ಆನಂತರ, ಈ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ 430 ಪ್ರಥಮ ದರ್ಜೆ ಕಾಲೇಜುಗಳಿದ್ದು, 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಹಲವಾರು ಮಂದಿ ಪಿಎಚ್‍ಡಿ, ಮಾಸ್ಟರ್ ಡಿಗ್ರಿ ಮಾಡಿದ್ದಾರೆ. ಅವರದ್ದು ಎರಡು ಬೇಡಿಕೆಗಳಿವೆ. ಮೊದಲನೆಯದು ಅವರಿಗೆ ವರ್ಷದ 12 ತಿಂಗಳು ವೇತನ ನೀಡಬೇಕು, ಮತ್ತೊಂದು ಅವರನ್ನು ಖಾಯಂಗೊಳಿಸುವುದು ಎಂದರು.
ದಿಲ್ಲಿಯಲ್ಲಿ ಇತ್ತೀಚೆಗೆ 16 ಸಾವಿರ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲಾಗಿದೆ. ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಸೆಮಿಸ್ಟರ್‍ಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಸಿ ಅಂಡ್ ಆರ್ ನಿಯಮಗಳಿಗೆ ತಿದ್ದುಪಡಿ ತಂದು ಇವರ ನೆರವಿಗೆ ಧಾವಿಸಬೇಕು ಎಂಬುದು ಬೇಡಿಕೆಯಾಗಿದೆ ಎಂದು ಸರಕಾರ ಈ ಬಗ್ಗೆ ಗಮನ ಹರಿಸಲಿ ಎಂದರು.







