ಕುಕ್ಕೆಹಳ್ಳಿ ಪಿಡಿಓಗೆ ಬೆದರಿಕೆ : ಆರೋಪಿ ಬಂಧನ

ಉಡುಪಿ, ಡಿ.17: ಕುಕ್ಕೆಹಳ್ಳಿ ಪಿಡಿಓ ಕಾರನ್ನು ಹಿಂಬಾಳಿಸಿಕೊಂಡು ಬಂದು ಬೆದರಿಕೆ ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರದ ಸುರೇಶ್ (35) ಬಂಧಿತ ಆರೋಪಿ. ಪಿಡಿಓ ರಾಜೇಶ್ವರಿ ಎನ್. (47) ಎಂಬವರು ಡಿ.16ರಂದು ಸಂಜೆ ಉಡುಪಿ ಲೋಕಾಯುಕ್ತ ಕಚೇರಿಗೆ ದಾಖಲೆಗಳನ್ನು ಸಲ್ಲಿಸಲು ತನ್ನ ಕಾರಿನಲ್ಲಿ ಕುಕ್ಕೆಹಳ್ಳಿಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಕೆ.ಜಿ.ರೋಡ್ ಜಂಕ್ಷನ್‌ನಲ್ಲಿ ಬೈಕಿನಲ್ಲಿದ್ದ ಸುರೇಶ್, ಹಿಂಬಾಲಿಸಿ ಕೊಂಡು ಬಂದನು. ಈ ಮಧ್ಯೆ ಕೈ ಸನ್ನೆ ಮಾಡುತ್ತ ರಾಜೇಶ್ವರಿ ಅವರ ಕಾರಿಗೆ ಅಡ್ಡ ಬರುತ್ತ ಲೋಕಾಯುಕ್ತ ಕಚೇರಿವರೆಗೆ ಬಂದನು. ಅಲ್ಲಿ ಆತ ರಾಜೇಶ್ವರಿಗೆ ದೂರು ಕೊಡು ನಿನ್ನನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ರಾಜೇಶ್ವರಿ ಬರುವವರೆಗೆ ಕಾಯುತಿದ್ದನು. ಈ ಬಗ್ಗೆ ರಾಜೇಶ್ವರಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಸುರೇಶ್ ಬೈಕಿಗೆ ರಾಜೇಶ್ವರಿ ಕಾರು ತಾಗಿದ್ದು, ಈ ವಿಚಾರ ರಾಜೇಶ್ವರಿ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಆತ ಅವರನ್ನು ಹಿಂಬಾಳಿಸಿಕೊಂಡು ಬರುತ್ತಿದ್ದನು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.





