ಕೇಂದ್ರ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಮರುಪರಿಶೀಲಿಸಬೇಕು: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ನಾಗಾಲ್ಯಾಂಡ್ ಸಾವುಗಳು

photo:PTI
ಹೊಸದಿಲ್ಲಿ,ಡಿ.17: ಇತ್ತೀಚಿಗೆ ನಾಗಾಲ್ಯಾಂಡ್ನಲ್ಲಿ ಸಶಸ್ತ್ರ ಪಡೆಗಳಿಂದ ನಾಗರಿಕರ ಹತ್ಯೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ನೆಚ್ಚಾರ್ಸಿ)ದ ಅಧ್ಯಕ್ಷ ನ್ಯಾ(ನಿವೃತ್ತ).ಎ.ಕೆ.ಮಿಶ್ರಾ ಅವರು, 1958ರ ಸಶಸ್ತ್ರ ಪಡೆಗಳ (ವಿಶೇಷಾಧಿಕಾರಗಳು) ಕಾಯ್ದೆ (ಅಫ್ಸ್ಪಾ) ಮತ್ತು ಅದರ ಅನುಷ್ಠಾನವನ್ನು ಕೇಂದ್ರವು ಮರುಪರಿಶೀಲಿಸುವ ಅಗತ್ಯವಿದೆ ಎಂದು ಶುಕ್ರವಾರ ಇಲ್ಲಿ ಹೇಳಿದರು.
ಮೊದಲಿಗೆ ಅಫ್ಸ್ಪಾವನ್ನು ಅನ್ವಯಿಸಬೇಕೇ ಎನ್ನುವುದನ್ನು ಕೇಂದ್ರವು ಮರುಪರಿಶೀಲಿಸಬೇಕು ಮತ್ತು ಪರಿಸ್ಥಿತಿ ಸುಧಾರಿಸಿದ ಸಂದರ್ಭದಲ್ಲಿ ಅದರ ಅನುಷ್ಠಾನವನ್ನು ಸರಕಾರವು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ ನ್ಯಾ.ಮಿಶ್ರಾ,‘ಆದಾಗ್ಯೂ ಈ ಕಾಯ್ದೆಯಿಂದಾಗಿ ಮಾನವ ಹಕ್ಕುಗಳ ಉಲ್ಲಂಘನೆಗಳು ನಡೆದಿವೆ ಎಂದು ನಾವು ಹೇಳಲಾಗದು ’ ಎಂದರು.
ಸಶಸ್ತ್ರ ಪಡೆಗಳ ಗುಂಡುಗಳಿಗೆ ಬಲಿಯಾದವರಿಗೆ ನ್ಯಾಯಕ್ಕಾಗಿ ಮತ್ತು ವಿವಾದಾತ್ಮಕ ಅಫ್ಸ್ಪಾ ರದ್ದತಿಗೆ ಆಗ್ರಹಿಸಿ ನಾಗಾಲ್ಯಾಂಡ್ನ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು,ಸಾವಿರಾರು ಜನರು ಬೀದಿಗಿಳಿದಿದ್ದಾರೆ.
ನಾಗಾಲ್ಯಾಂಡ್ನಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವಿಲ್ಲವಾದರೂ ಜನತೆ ಎನ್ನೆಚ್ಚಾರ್ಸಿಯನ್ನು ಸಂಪರ್ಕಿಸಬಹುದು ಎಂದು ಹೇಳಿದ ನ್ಯಾ.ಮಿಶ್ರಾ,‘ನಾಗಾಲ್ಯಾಂಡ್ ಹತ್ಯೆಗಳಿಗೆ ಸಂಬಂಧಿಸಿದಂತೆ ನಾವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ರಾಜ್ಯ ಸರಕಾರದ ವಿಶೇಷ ತನಿಖಾ ತಂಡದ ವರದಿಗಾಗಿ ಕೋರಿದ್ದೇವೆ. ಮಾಹಿತಿಗಳನ್ನು ಒದಗಿಸುವಂತೆ ಮತ್ತು ತನ್ನ ನಿಲುವನ್ನು ಸ್ಪಷ್ಟಪಡಿಸುವತೆ ನಾವು ಕೇಂದ್ರ ಗೃಹ ಸಚಿವಾಲಯಕ್ಕೂ ಸೂಚಿಸಿದ್ದೇವೆ’ ಎಂದು ತಿಳಿಸಿದರು. ವಿಷಯವು ವಿಚಾರಣಾಧೀನವಾಗಿದೆ,ಹೀಗಾಗಿ ಈ ಬಗ್ಗೆ ತಾನು ಹೆಚ್ಚಿಗೆ ಮಾತನಾಡುವುದಿಲ್ಲ ಎಂದರು.
ಈ ತಿಂಗಳ ಪೂರ್ವಾರ್ಧದಲ್ಲಿ ನಾಗರಿಕರ ಹತ್ಯೆಗಳಿಗೆ ಸಂಬಂಧಿಸಿದಂತೆ ಎನ್ನೆಚ್ಚಾರ್ಸಿ ಕೇಂದ್ರ ಮತ್ತು ನಾಗಾಲ್ಯಾಂಡ್ ಸರಕಾರಗಳಿಗೆ ನೋಟಿಸುಗಳನ್ನು ಹೊರಡಿಸಿತ್ತು.