ಮಂಗಳೂರು: 'ಬಿ ಹ್ಯೂಮನ್'ನಿಂದ ಪದ್ಮವಿಭೂಷಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಮಂಗಳೂರು, ಡಿ.17: ಪದ್ಮವಿಭೂಷಣ (ಮರಣೋತ್ತರ) ಪುರಸ್ಕೃತ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಮಂಗಳೂರಿನ 'ಬಿ ಹ್ಯೂಮನ್' ಸಂಸ್ಥೆಯ ವತಿಯಿಂದ ಶುಕ್ರವಾರ ನಗರದ ಪುರಭವನದಲ್ಲಿ ಸನ್ಮಾನಿಸಲಾಯಿತು.
ವಿಶ್ವೇಶತೀರ್ಥ ಸ್ವಾಮೀಜಿಯ ಪರವಾಗಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಸನ್ಮಾನವನ್ನು ಸ್ವಿಕರಿಸಿದರು. ಬಳಿಕ ಮಾತನಾಡಿದ ಅವರು ಸಮಾಜದಿಂದ ನಾವು ಸಾಕಷ್ಟು ಪ್ರತಿಫಲ ಪಡೆಯುತ್ತೇವೆ. ಪಡೆದುದೆಲ್ಲವನ್ನೂ ಸಮಾಜಕ್ಕೆ ಮರಳಿಸಲು ನಮಗೆ ಸಾಧ್ಯವಿಲ್ಲ. ಆದರೆ ಅದರಲ್ಲಿ ಕಿಂಚಿತ್ತಾದರೂ ಮರಳಿಸಬೇಕು. ಆ ಮೂಲಕ ಸಮಾಜದ ಋಣವನ್ನು ತೀರಿಸಬೇಕು ಎಂದರು.
ನಮ್ಮ ಬದುಕು ಕಿತ್ತಳೆ ಹಣ್ಣಿನಂತೆ ಮುಖಾಮುಖಿಯಾಗಿರಬೇಕು. ಕಿತ್ತಳೆ ಹಣ್ಣು ಮಾರುತ್ತಲೇ ಶಾಲೆ ಕಟ್ಟಿದ ಹಾಜಬ್ಬರ ಬದುಕಿನ ಶೈಲಿ, ಗುರಿ, ಧ್ಯೇಯವನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಎಂದು ವಿಶ್ವಪ್ರಸನ್ನ ಸ್ವಾಮೀಜಿ ಪೇಜಾವರ ಹೇಳಿದರು.
'ಬಿ ಹ್ಯೂಮನ್' ಮಂಗಳೂರು ಘಟಕಾಧ್ಯಕ್ಷ ಮುಹಮ್ಮದ್ ಅಮೀನ್ ಎಚ್.ಎಚ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್, ಶಾಸಕ ಯು.ಟಿ ಖಾದರ್, ಎ.ಕೆ.ಎಂ ಅಶ್ರಫ್, ಬಿ.ಎಂ. ಫಾರೂಕ್, ಮಂಗಳೂರು ಧರ್ಮಪ್ರಾಂತದ ಪಿಆರ್‌ಒ ರಾಯ್ ಕ್ಯಾಸ್ಟಲಿನೊ, ಸೌದಿ ಅರೇಬಿಯಾದ ಅಲ್ ಮುಝೈನ್‌ನ ಝಕರಿಯಾ ಜೋಕಟ್ಟೆ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಬಿ ಹ್ಯೂಮನ್‌ನ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ಮಾಜಿ ಮೇಯರ್ ಕೆ. ಅಶ್ರಫ್, ಕಲ್ಕೂರಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಉಡುಪಿ ಸಹವಾಳ್ವೆ ಅಧ್ಯಕ್ಷ ಅಮೃತ ಶೆಣೈ, ಯೋಗೀಶ್ ಶೆಟ್ಟಿ ಜೆಪ್ಪು ಮತ್ತಿತರರು ಭಾಗವಹಿಸಿದ್ದರು.
ಸಮಾಜ ಸೇವಕ ರಫೀಕ್ ಮಾಸ್ಟರ್ ಮತ್ತು ಉಪನ್ಯಾಸಕಿ ಸುಹಾನಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ ಅವರ ವೈಯಕ್ತಿಕ ಬದುಕಿಗೆ ನೆರವು ನೀಡುವುದರ ಭಾಗವಾಗಿ 'ಬಿ ಹ್ಯೂಮನ್' ವತಿಯಿಂದ 10 ಲಕ್ಷ ರೂ.ನ ಚೆಕ್ ಹಸ್ತಾಂತರಿಸಲಾಯಿತು.
ಯುನಿಟಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಹಬೀಬ್ ರಹ್ಮಾನ್ ಅವರು ಕೊಡುಗೆಯಾಗಿ ನೀಡಿದ 'ಜೀವನಪರ್ಯಂತ ಉಚಿತ ವೈದ್ಯಕೀಯ ವ್ಯವಸ್ಥೆ'ಯ ದಾಖಲೆ ಪತ್ರವನ್ನು ಕೂಡ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ನೀಡಲಾಯಿತು. ಈ ಕೊಡುಗೆಯನ್ನು ಪದ್ಮವಿಭೂಷಣ ಪುರಸ್ಕೃತ ಡಾ.ಬಿ.ಎಂ. ಹೆಗ್ಡೆ ಅವರಿಗೂ ನೀಡಲಾಗುವುದು ಎಂದು ಸಭೆಯಲ್ಲಿ ಘೋಷಿಸಲಾಯಿತು. ಅನಾರೋಗ್ಯದ ಕಾರಣದಿಂದ ಡಾ.ಬಿ.ಎಂ. ಹೆಗ್ಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಬಿಎಂ ಹೆಗ್ಡೆ ಅವರಿಗೆ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.












