ಭೂ ಒಡೆತನ ಯೋಜನೆ: ನಕಲಿ ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ

ಬೆಳಗಾವಿ, ಡಿ.17: ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಿರುವ ಭೂ ಒಡೆತನ ಯೋಜನೆಯ ನಕಲಿ ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಶುಕ್ರವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ನಿಗಮಗಳಲ್ಲಿ ಭೂ ಒಡೆತನ ಯೋಜನೆ ಅಡಿ ಕೆಲವರು ರಾಜಕೀಯ ಒತ್ತಡ ಹೇರಿ, ನಕಲಿ ದಾಖಲೆ ಸೃಷ್ಟಿಸಿ ಉಳ್ಳವರೇ ಭೂಮಿ ಪಡೆದಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ದಾಖಲೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.
1991ರಿಂದ ಇಪ್ಪತ್ತು ವರ್ಷಗಳಲ್ಲಿ ಬರೋಬ್ಬರಿ 55 ಸಾವಿರಕ್ಕೂ ಅಧಿಕ ಎಕರೆ ಭೂಮಿಯನ್ನು 49 ಸಾವಿರ ಫಲಾನುಭವಿಗಳಿಗೆ ಈ ಯೋಜನೆದಡಿ ಹಂಚಿಕೆ ಮಾಡಲಾಗಿದ್ದು, ಇದರ ಮೊತ್ತ 1,360 ಕೋಟಿಯಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಅಲ್ಲದೆ, ಎರಡು ತಿಂಗಳಿನಲ್ಲಿ ಸಭೆ ನಡೆಸಿ ಸಮೀಕ್ಷೆ ನಡೆಸಲು ಸೂಚಿಸಿದ್ದೇನೆ. ರಾಯಚೂರು 53, ಮಂಡ್ಯ ಜಿಲ್ಲೆಯ ಎರಡು ಪ್ರಕರಣಗಳಲ್ಲಿ ಭೂ ಮಂಜೂರಾಗಿದ್ದರೂ ಫಲಾನುಭವಿಗಳಿಗೆ ಭೂಮಿ ಸ್ವಾಧೀನ ಸಿಕ್ಕಿಲ್ಲ. ಮಾಲಕರ ಕೈನಲ್ಲೇ ಭೂಮಿ ಇದ್ದರೆ ಅಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ತಿಳಿಸಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ವೈ.ಎ.ನಾರಾಯಣಸ್ವಾಮಿ, ಕೆಲ ಜಿಲ್ಲೆಯಲ್ಲಿ ಮಾತ್ರ ಭೂಮಿ ಪಡೆದವರ ಸಂಖ್ಯೆ ಹೆಚ್ಚಿದೆ. ಇದರ ಕಾರಣಗಳೇನು. ಈ ಬಗ್ಗೆ ಇಲಾಖೆಯೂ ಸೂಕ್ತವಾಗಿ ಪರಿಶೀಲನೆ ನಡೆಸಬೇಕು ಎಂದು ಸದನದ ಗಮನ ಸೆಳೆದರು.







