ಘಾನದಿಂದ ಬಂದ ಪ್ರಯಾಣಿಕನಲ್ಲಿ ಕೋವಿಡ್ ಪಾಸಿಟಿವ್; ತುರ್ತು ಸಭೆ ನಡೆಸಿದ ದ.ಕ. ಜಿಲ್ಲಾಧಿಕಾರಿ

ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.17: ಹೈರಿಸ್ಕ್ ದೇಶವಾಗಿರುವ ಘಾನದಿಂದ ಗುರುವಾರ ಆಗಮಿಸಿದ ಪ್ರಯಾಣಿಕನ ಆರ್ಟಿಪಿಸಿಆರ್ ತಪಾಸಣೆ ವೇಳೆ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೆಂದ್ರ ಕೆ.ವಿ. ತುರ್ತಾಗಿ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರು, ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿ, ಜಿಲ್ಲಾ ಸರ್ವೇಕ್ಷಾಣಾಧಿಕಾರಿ, ಕೋವಿಡ್ ನೋಡಲ್ ಅಧಿಕಾರಿ ಹಾಗೂ ಅಪೋಲೋ ಲ್ಯಾಬ್ ಮುಖ್ಯಸ್ಥರೊಂದಿಗೆ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ತುರ್ತು ಸಭೆ ನಡೆಸಿದರು.
ಘಾನ ದೇಶದಿಂದ ಬಂದ ಪ್ರಯಾಣಿಕರ ಪೈಕಿ ಒಬ್ಬರಲ್ಲಿ ಕಂಡು ಬಂದ ಪಾಸಿಟಿವ್ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ ವೆನ್ಲಾಕ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್ಗೆ ದಾಖಲಿಸಲಾಗಿದೆ. ಆ ಪ್ರಯಾಣಿಕನಲ್ಲಿ ಯಾವುದೇ ರೋಗದ ಲಕ್ಷಣ ಕಂಡು ಬಂದಿರುವುದಿಲ್ಲ. ಆ ಪ್ರಯಾಣಿಕ ಆಸೀನವಾಗಿದ್ದ 3 ಸಾಲಿನ ಎದುರು ಹಾಗೂ 3 ಸಾಲಿನ ಹಿಂದಿನ ಪ್ರಯಾಣಿಕರು ಸೇರಿದಂತೆ 27 ಪ್ರಯಾಣಿಕರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಿ ಅವರನ್ನು ಆರೋಗ್ಯ ಇಲಾಖೆಯಿಂದ ಆರ್ಟಿಪಿಸಿಆರ್ ಮತ್ತು ಇತರ ಪರೀಕ್ಷೆಗೆ ಒಳಪಡಿಸಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಪ್ರಯಾಣಿಕರ ಗಂಟಲು ದ್ರವ್ಯ ಮಾದರಿಯನ್ನು ಜನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಈಗಾಗಲೇ ಕಳುಸಿಕೊಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿಮಾನ ನಿಲ್ದಾಣದ ಮುಖ್ಯಾಧಿಕಾರಿ ನೀರವ್ ಶಾ, ಕೋವಿಡ್ ನೋಡಲ್ ಅಧಿಕಾರಿ ಡಾ.ಎಚ್.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.





