ನಾಗಾಲ್ಯಾಂಡ್: ನಾಗರಿಕರ ಸಾವು ಪ್ರಕರಣ; ಕೋಹಿಮಾದಲ್ಲಿ ಬೃಹತ್ ಪ್ರತಿಭಟನೆ

File Photo | PTI
ಕೋಹಿಮಾ, ಡಿ. 17: ನಾಗಾಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಸೇನಾ ಪಡೆ ಬಂಡುಕೋರರ ವಿರುದ್ಧ ನಡೆಸಿದ ಕಾರ್ಯಾಚರಣೆ ಸಂದರ್ಭ ಹಾಗೂ ಅನಂತರ 14 ನಾಗರಿಕರು ಸಾವನ್ನಪ್ಪಿರುವ ಘಟನೆ ಖಂಡಿಸಿ ಕೋಹಿಮಾದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆದಿದೆ. ನಾಗಾ ಸ್ಟೂಡೆಂಟ್ ಫೆಡರೇಶನ್ (ಎನ್ಎಸ್ಎಫ್) ನಗರದಲ್ಲಿ ಈ ರ್ಯಾಲಿ ಆಯೋಜಿಸಿತ್ತು.
ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಸೇನಾ ಕಾರ್ಯಾಚರಣೆ ಸಂದರ್ಭ ಮೃತಪಟ್ಟ ನಾಗರಿಕರಿಗೆ ನ್ಯಾಯ ನೀಡುವಂತೆ ಹಾಗೂ ವಿವಾದಾತ್ಮಕ ಶಸ್ತ್ರಾಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್ಪಿಎ)ಯನ್ನು ರದ್ದುಗೊಳಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು. ‘‘ಎಎಫ್ಎಸ್ಪಿಎ ರದ್ದುಗೊಳಿಸುವ ಮುನ್ನ ಎಷ್ಟು ಬಾರಿ ಗುಂಡು ಹಾರಿಸಬೇಕು’’, ‘‘ಎಎಫ್ಎಸ್ಪಿಎ ನಿಷೇಧಿಸಿ, ನಮ್ಮ ಧ್ವನಿಯನ್ನಲ್ಲ’’ ಎಂದು ಬ್ಯಾನರುಗಳು ಹಾಗೂ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.
ಇಂದಿನ ರ್ಯಾಲಿ ಪ್ರತಿಭಟನೆ ಸತತ ಮೂರನೆಯ ದಿನಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿಲ್ಲ. ಬದಲಾಗಿ, ನಾಗ ಜನರ ಆಕ್ರೋಶದ ನಿರಂತರ ಉಲ್ಬಣವನ್ನು ಸೂಚಿಸಿರುವ ಕಾರಣಕ್ಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾಜ್ಯದ ಪೂರ್ವ ಭಾಗದಲ್ಲಿ ಗುರುವಾರ ಪ್ರತಿಭಟನೆಗಳು ತೀವ್ರಗೊಂಡವು. ಮೊನ್ ಜಿಲ್ಲೆಯಲ್ಲಿ ಬೆಳಗ್ಗಿನಿಂದ ಸಂಜೆ ವರೆಗೆ ಬಂದ್ ನಡೆಯಿತು. ಸರಕಾರಿ ಹಾಗೂ ಖಾಸಗಿ ಕಚೇರಿಗಳು ಮುಚ್ಚಿದ್ದವು. ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮೊನ್ ಜಿಲ್ಲೆಯಲ್ಲಿ ಅಲ್ಲದೆ, ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಾದ ಕಿಫಿರೆ, ತುಯೆನ್ಸಾಂಗ್, ನೊಕ್ಲಾಕ್ ಹಾಗೂ ಲೋಂಗ್ಲೆಂಗ್ನಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆಕ್ರೋಶಿತ ಪ್ರತಿಭಟನಕಾರರು ಬೀದಿಗಿಳಿದಿದ್ದರು.