ವಕೀಲರ ವಿರುದ್ಧ ಮಾನ ಹಾನಿಕರ ವರದಿ ಪ್ರಕರಣ: ಪತ್ರಕರ್ತನ ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಡಿ. 17: ವಕೀಲರೊಬ್ಬರ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸಿದ ಪ್ರಕರಣದಲ್ಲಿ ಕನ್ನಡ ವಾರ ಪತ್ರಿಕೆ ‘ತುಂಗಾ ವಾರ್ತಾ’ದ ಸಂಪಾದಕ, ಮುದ್ರಕ ಹಾಗೂ ಪ್ರಕಾಶಕನಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಶಿಕ್ಷೆ ವಿಧಿಸಿ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ. ‘‘ಈ ಆದೇಶ ತುಂಬಾ ಉದಾರವಾಗಿದೆ. ಇದು ಕೇವಲ ಒಂದೇ ತಿಂಗಳು. ಅದಕ್ಕೆ ಅವರು ಹೆಚ್ಚು ಅರ್ಹರಾಗಿದ್ದಾರೆ’’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಮೂವರು ಸದಸ್ಯರ ಪೀಠ ಹೇಳಿದೆ. ಈ ರೀತಿಯ ಪತ್ರಿಕೋದ್ಯಮವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಾವು ವಕೀಲರನ್ನು ರಕ್ಷಿಸುವ ಅಗತ್ಯತೆ ಕೂಡ ಇದೆ ಎಂದು ಅವರು ಹೇಳಿದರು. ‘‘ನೀವು ಈ ರೀತಿಯ ಭಾಷೆ ಬಳುಸುತ್ತೀರಿ ಹಾಗೂ ಪತ್ರಕರ್ತರೆಂದು ಹೇಳುತ್ತೀರಿ. ಇದು ವಿಶಿಷ್ಟ ಪೀತ ಪತ್ರಿಕೋದ್ಯಮ’’ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ಮೇಲ್ಮನವಿದಾರ ಹಾಗೂ ‘ತುಂಗಾ ವಾರ್ತಾ’ದ ಸಂಪಾದಕ, ಮುದ್ರಕ ಹಾಗೂ ಪ್ರಕಾಶಕ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಕೂಡ ಒಳಗೊಂಡಿದ್ದ ಪೀಠ ವಿಚಾರಣೆ ನಡೆಸಿತು. ಉಚ್ಚ ನಾಯಾಲಯ ಅವರ ಶಿಕ್ಷೆಯ ಪ್ರಮಾಣವನ್ನು ಒಂದು ತಿಂಗಳಿಗೆ ಇಳಿಸಿತ್ತು ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು.