ಸಾಮಾಜಿಕ ಜಾಲತಾಣ ಬಳಕೆ: ಸರ್ಕಾರಿ ನೌಕರರಿಗೆ ಕೆಲ ನಿರ್ಬಂಧ
ಸ್ಥಳೀಯ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚನೆ

ಬೆಂಗಳೂರು: ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ನಿರ್ಬಂಧಿಸಿ ಇತ್ತೀಚೆಗೆ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಇದೀಗ, ಈ ಆದೇಶವನ್ನು ಸ್ಥಳೀಯ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸೂಚನೆ ನೀಡಿದೆ.
ಇತ್ತೀಚೆಗೆ ಸರ್ಕಾರ ನೀಡಿರುವ ಸುತ್ತೋಲೆಯಲ್ಲಿ ಈ ಸೂಚನೆ ನೀಡಲಾಗಿದ್ದು, ಸರ್ಕಾರಿ ನೌಕರರು ಸರ್ಕಾರವನ್ನು ಟೀಕಿಸುವುದು ಅಥವಾ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಗಳನ್ನು ಟೀಕಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇಂಥ ಸಿಬ್ಬಂದಿಯ ವಿರುದ್ಧ ಸ್ಥಳೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನಿರ್ದೇಶನ ನೀಡಿದೆ.
"ಕೆಲ ಸರ್ಕಾರಿ ನೌಕರರು, ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮಾವಳಿ-2021ನ್ನು ಉಲ್ಲಂಘಿಸಿ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹರಿದು ಬಿಡುತ್ತಿರುವುದು ಮತ್ತು ಇತರ ಸಿಬ್ಬಂದಿಯ ವಿರುದ್ಧ ಅಭಿಪ್ರಾಯಗಳನ್ನು ಶೇರ್ ಮಾಡುವ ಮೂಲಕ ಅವರನ್ನು ಅವಮಾನಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮಾವಳಿ-2021 ಅನ್ವಯ ಸೂಚನೆ ನೀಡಿದ್ದಾಗ್ಯೂ ಕೆಲ ಸಿಬ್ಬಂದಿ ಕೆಲ ರಾಜಕೀಯ ಪಕ್ಷಗಳ ಬಗ್ಗೆ ಲೇಖನಗಳು, ವಿಡಿಯೊಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ" ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಆದರೆ ಉದ್ಯೋಗಿಗಳ ಸ್ಥಿತಿಗತಿ ಮತ್ತು ಕೆಲಸದ ವಾತಾವರಣ ಸುಧಾರಿಸಿದ ಬಗೆಗೆ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುವವರಿಗೆ ಈ ನಿರ್ಬಂಧಗಳಿಂದ ವಿನಾಯ್ತಿ ನೀಡಿದೆ.







