ಉತ್ತರಪ್ರದೇಶ: ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಅಖಿಲೇಶ್ ಯಾದವ್ ಆಪ್ತರ ಮನೆ ಮೇಲೆ ಐಟಿ ದಾಳಿ

ಲಕ್ನೊ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಜ್ಯದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತರೂ ಆಗಿರುವ ಸಮಾಜವಾದಿ ಪಕ್ಷದ ನಾಯಕ, ವಕ್ತಾರ ರಾಜೀವ್ ರಾಯ್ ಅವರ ಮನೆಗೆ ಇಂದು ಬೆಳಗ್ಗೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಯಾದವ್ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯಲ್ಲಿ ಅಖಿಲೇಶ್ ಯಾದವ್ ಅವರ ಮತ್ತೊಬ್ಬ ಆಪ್ತನ ಮೇಲೆ ದಾಳಿ ಮಾಡಲಾಗಿದೆ. ಅಲ್ಲಿ ದಾಳಿಗೆ ಒಳಗಾದ ಮನೋಜ್ ಯಾದವ್ ಆರ್ ಸಿಎಲ್ ಗ್ರೂಪ್ ಎಂಬ ಕಂಪನಿಗಳ ಸಮೂಹದ ಪ್ರವರ್ತಕರಾಗಿದ್ದಾರೆ.
ವಾರಣಾಸಿಯಿಂದ ಆದಾಯ ತೆರಿಗೆ ಇಲಾಖೆಯ ತಂಡವೊಂದು ಶನಿವಾರ ಬೆಳಗ್ಗೆ ಪೂರ್ವ ಉತ್ತರಪ್ರದೇಶದ ಮೌ ಜಿಲ್ಲೆಯಲ್ಲಿರುವ ರಾಜೀವ್ ರಾಯ್ ಅವರ ಮನೆಗೆ ತಲುಪಿದೆ.
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಯೋಜನೆಗಳ ಬಗ್ಗೆ ಅಖಿಲೇಶ್ ಯಾದವ್ ಬಿಜೆಪಿಯನ್ನು ಟೀಕಿಸುತ್ತಿರುವಾಗಲೇ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮೊದಲು ಈ ದಾಳಿಗಳು ನಡೆದಿವೆ. ಈ ಎಲ್ಲಾ ಯೋಜನೆಗಳು ತಮ್ಮ ಅಧಿಕಾರಾವಧಿಯಲ್ಲಿ ಆರಂಭವಾಗಿದ್ದವು ಎಂದು ಯಾದವ್ ಹೇಳಿಕೊಂಡರೆ, ಇದು ಕೇವಲ ಚುನಾವಣೆಗಳ ಮೇಲೆ ಕಣ್ಣಿಟ್ಟು ಕ್ರೆಡಿಟ್ ಪಡೆಯುವ ಪ್ರಯತ್ನವಾಗಿದೆ ಎಂದು ಬಿಜೆಪಿ ಹೇಳಿದೆ.
"ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಅಥವಾ ಕಪ್ಪು ಹಣವಿಲ್ಲ, ನಾನು ಜನರಿಗೆ ಸಹಾಯ ಮಾಡುತ್ತೇನೆ. ಇದು ಸರಕಾರಕ್ಕೆ ಇಷ್ಟವಾಗಲಿಲ್ಲ. ಇದು ಅದರ ಪರಿಣಾಮವಾಗಿದೆ. ನೀವು ಏನಾದರೂ ಮಾಡಿದರೆ ಅವರು ವೀಡಿಯೊ ಮಾಡುತ್ತಾರೆ, ಎಫ್‌ಐಆರ್ ದಾಖಲಿಸುತ್ತಾರೆ, ನೀವು ಅನಾವಶ್ಯಕವಾಗಿ ಪ್ರಕರಣದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ'' ಎಂದು ಕರ್ನಾಟಕದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಸಮೂಹದ ಮಾಲಕರಾಗಿರುವ ರಾಯ್ ಇಂದು ಮುಂಜಾನೆ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ರಾಜೀವ್ ರಾಯ್ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು 2012 ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಯಶಸ್ಸಿನ ಹಿಂದಿನ ವ್ಯಕ್ತಿ ಎಂದು ನಂಬಲಾಗಿದೆ.
ರಾಯ್ 2014ರಲ್ಲಿ ಘೋಸಿ ಕ್ಷೇತ್ರದಿಂದ ಲೋಕಸಭೆ ಅಭ್ಯರ್ಥಿಯಾಗಿದ್ದರು.
ಉತ್ತರಪ್ರದೇಶದ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಆಡಳಿತಾರೂಢ ಬಿಜೆಪಿಗೆ ಪ್ರಮುಖ ಸವಾಲಾಗಿ ಹೊರಹೊಮ್ಮಿದೆ ಎಂದು ಕೆಲವು ವಿಶ್ಲೇಷಕರು ಹೇಳುತ್ತಿದ್ದಾರೆ ಎಂದು NDTV ವರದಿ ಮಾಡಿದೆ.







