ನಿಟ್ಟೆ ವಿಶ್ವವಿದ್ಯಾನಿಲಯದ ಹಸಿರು ಉಪಕ್ರಮಗಳಿಗೆ ಅಂತಾರಾಷ್ಟ್ರೀಯ ಮನ್ನಣೆ

ಮಂಗಳೂರು, ಡಿ.18: ನಿಟ್ಟೆ (ಡೀಮ್ಡ್ ಟುಬಿ ಯುನಿರ್ವಸಿಟಿ) 2021ರಲ್ಲಿ 'ಯುಐ ಗ್ರೀನ್ ಮ್ಯಾಟ್ರಿಕ್ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್ಸ್ ನಲ್ಲಿ 253ನೇ ಸ್ಥಾನವನ್ನು ಗಳಿಸಿದೆ.
ಹಸಿರು ಕ್ಯಾಂಪಸ್ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನೀತಿಗಳು ಮತ್ತು ಕ್ರಮಗಳಿಗೆ ಸಂಬಂಧಿಸಿ ಪ್ರಪಂಚದಾದ್ಯಂತದ ವಿಶ್ವವಿದ್ಯಾನಿಲಯಗಳ ಕೊಡುಗೆಗಳನ್ನು ಗುರುತಿಸಿ ನೀಡುವ ಅಂತಾರಾಷ್ಟ್ರೀಯ ಶ್ರೇಯಾಂಕ ಇದಾಗಿದೆ. ಈ ವರ್ಷ 84 ದೇಶಗಳ ಒಟ್ಟು 956 ವಿಶ್ವವಿದ್ಯಾನಿಲಯಗಳು ಈ ಶ್ರೇಯಾಂಕದಲ್ಲಿ ಭಾಗವಹಿಸಿದ್ದು, ನಿಟ್ಟೆ ವಿವಿ ಮೊದಲ ಬಾರಿ ಈ ಶ್ರೇಯಾಂಕ ಸಮೀಕ್ಷೆಯಲ್ಲಿ ಭಾಗವಹಿಸಿದೆ.
ಈ ಸಮೀಕ್ಷೆಯು ಪರಿಸರ ಸ್ನೇಹಿ ಮೂಲಸೌಕರ್ಯ, ಇಂಧನ, ಹವಾಮಾನ ಬದಲಾವಣೆ, ತ್ಯಾಜ್ಯ ನಿರ್ವಹಣೆ, ನೀರು, ಸಾರಿಗೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿ 39 ಸೂಚಕಗಳನ್ನು ಮೌಲ್ಯಮಾಪನವನ್ನು ಒಳಗೊಂಡಿದೆ. ಸುಸ್ಥಿರ ಕ್ರಮಗಳು ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಕಾಳಜಿ ವಹಿಸುವುದಕ್ಕೆ ನಿಟ್ಟೆ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ಉತ್ತೇಜನ ನೀಡಲಾಗುತ್ತದೆ.
ಈ ವರ್ಷದ ಆರಂಭದಲ್ಲಿ, ನಿಟ್ಟೆ ವಿಶ್ವವಿದ್ಯಾನಿಲಯವು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಲಿಂಗ ಸಮಾನತೆ ಮತ್ತು ಶುದ್ಧ ನೀರು ಮತ್ತು ನೈರ್ಮಲ್ಯದ ವಿಭಾಗಗಳಲ್ಲಿ 'ಟೈಮ್ಸ್ ಹೈಯರ್ ಎಜ್ಯುಕೇಶನ್ ಇಂಪ್ಯಾಕ್ಟ್ ರ‍್ಯಾಂಕಿಂಗ್ಸ್ ನ ವಿಶ್ವದ ಟಾಪ್ 200 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.







