ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ದೀರ್ಘಸಮಯದ ಬಳಿಕ ಅಮೇಠಿಗೆ ಮರಳಿದ ರಾಹುಲ್ ಗಾಂಧಿ

ಅಮೇಠಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ತಮ್ಮ ಹಿಂದಿನ ಭದ್ರಕೋಟೆಯಾದ ಅಮೇಠಿಗೆ ಆಗಮಿಸಿದ್ದಾರೆ. 2019 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಎರಡೂವರೆ ವರ್ಷಗಳ ನಂತರ ರಾಹುಲ್ ಗಾಂಧಿ ಅಮೇಠಿಗೆ ಮೊದಲ ಭೇಟಿಯಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿ ಶನಿವಾರ ಬೆಳಗ್ಗೆ ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ರಸ್ತೆ ಮೂಲಕ ಅಮೇಠಿ ತಲುಪಲಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರೊಂದಿಗೆ ಜಗದೀಶ್‌ಪುರದ ರಾಮಲೀಲಾ ಮೈದಾನದಿಂದ ಹರಿಮೌವರೆಗೆ 6 ಕಿ.ಮೀ. ಉದ್ದದ ಪಾದಯಾತ್ರೆ (ಕಾಲ್ನಡಿಗೆ ಮೆರವಣಿಗೆ) ನಡೆಸಲಿದ್ದಾರೆ. ಪಾದಯಾತ್ರೆಗೆ ಸುಮಾರು 50 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ.
15 ವರ್ಷಗಳ ಕಾಲ ಅಮೇಠಿಯನ್ನು ಪ್ರತಿನಿಧಿಸಿದ್ದ ರಾಹುಲ್ ಗಾಂಧಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ 55,120 ಮತಗಳಿಂದ ಸೋತಿದ್ದರು. ರಾಹುಲ್ ಗಾಂಧಿ ಸೋಲುವ ಮುನ್ನ ಅಮೇಠಿ ಲೋಕಸಭಾ ಕ್ಷೇತ್ರವನ್ನು ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾಗಿತ್ತು.
ಅಮೇಠಿ ಸಂಸದೀಯ ಕ್ಷೇತ್ರವು ಐದು ಅಸೆಂಬ್ಲಿ ಸ್ಥಾನಗಳನ್ನು ಹೊಂದಿದೆ. ಅವುಗಳಲ್ಲಿ ನಾಲ್ಕು ಅಮೇಠಿ, ಜಗದೀಶ್‌ಪುರ, ಸಲೋನ್, ತಿಲೋಯ್ ಬಿಜೆಪಿ ಜೊತೆಗಿದ್ದರೆ, ಗೌರಿಗಂಜ್ ಕ್ಷೇತ್ರವು ಹಿಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆದ್ದಿತ್ತು.







